ರಾಯಬಾಗ: ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನಕಲಿ ಮದುವೆ ಮಾಡಿಸಿ 3 ಲಕ್ಷ ಹಣ ಪಡೆದು ವಂಚಿಸಿ ರಾತ್ರಿ ಮನೆ ಬಿಟ್ಟು ಓಡಿ ಹೋಗುವ ಖತರ್ನಾಕ್ ಗ್ಯಾಂಗ್ ನ್ನು ಹಿಡಿದು ಮನೆಯಲ್ಲಿಯೇ ಕೂಡಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಕ್ಕದ ಮಹಾರಾಷ್ಟ್ರ ರಾಜ್ಯದ ಈ ಗ್ಯಾಂಗ್ ಕರ್ನಾಟಕದ ಕೆಲ ಜನರ ಸಂಪರ್ಕ ಪಡೆದು ಅವರಿಂದ ಇನ್ನೂ ಮದುವೆ ಆಗದೆ ಇರುವವರನ್ನು ಟಾರ್ಗೆಟ್ ಮಾಡಿ ಮದುವೆ ಮಾಡಿಸಿ ಕೊಡುತ್ತೇವೆ ಎಂದು ಹೇಳಿ ಅವರಿಂದ 3 ಲಕ್ಷ ಹಣ ಪಡೆದು ರಾತ್ರೋರಾತ್ರಿ ಮನೆಲ್ಲಿ ಇರುವ ಬೆಳ್ಳಿ- ಬಂಗಾರ ಬಟ್ಟೆ ತೆಗೆದುಕೊಂಡು ಓಡಿ ಹೋಗುವ ಪ್ಲಾನ್ ಮಾಡಿದ ಡೇಂಜರಸ್ ಜೋಡಿಗಳು ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದಾರೆ.
ಇತ್ತೀಚಿಗಷ್ಟೇ ಇವರು ರಾಯಬಾಗ, ಚಿಕ್ಕೋಡಿ, ಹುಕ್ಕೇರಿ, ಅಥಣಿ ಸೇರಿದಂತೆ ಕರ್ನಾಟಕ ಗಡಿ ಗ್ರಾಮಗಳಲ್ಲಿ ಈ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಇನ್ನು, ಈ ಗ್ಯಾಂಗ್ ಸಂಪರ್ಕ ರಾಯಬಾಗ್ ನಲ್ಲಿ ಕೂಡಾ ಇದೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.
ಅಥಣಿ ಮೂಲದ ವ್ಯಕ್ತಿಗೆ ಮದುವೆ ಮಾಡಿ ಅಲ್ಲಿ ಕೂಡಾ 3 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಸಂಬಂಧ ಸಂತ್ರಸ್ತರು ರಾಯಬಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಕೇಸ್ ದಾಖಲಿಸದೇ ಸಂಧಾನ ಮಾಡಿಸಿ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.
PublicNext
10/01/2025 08:48 am