ಗೋಕಾಕ: ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಸ್ಥಳೀಯರು ಹಿಡಿದು ಗೋಕಾಕ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದರೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಸಂಜೆ ವೇಳೆಗೆ ಕಳ್ಳನನ್ನು ಹೊರಗೆ ಬಿಟ್ಟಿದ್ದಾರೆಂದು ಜನರು ಗಂಭೀರ ಆರೋಪ ಮಾಡಿದ್ದಾರೆ.
ಗೋಕಾಕ ನಗರದ ಗುರುವಾರ ಪೇಠದಲ್ಲಿ ವಾರದ ಹಿಂದೆ ಗಾಂಜಾ ನಶೆಯಲ್ಲಿದ್ದ ಓರ್ವ ಖದೀಮ ಯಾರೂ ಇಲ್ಲದ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾಗ ಪಕ್ಕದ ಮನೆಯವರು ನೋಡಿ ಆತನನ್ನು ಹಿಡಿದು ನಗರ ಪೊಲೀಸ್ ಸ್ಟೇಷನ್ ಗೆ ಒಪ್ಪಿಸಿದ್ದರು. ಆದರೆ, ಪೊಲೀಸರು ಆತನ ಮೇಲೆ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆತ ಗಾಂಜಾ ನಶೆಯಲ್ಲಿದ್ದಾನೆಂದು ಹೇಳಿ ಕಳ್ಳನನ್ನು ಸಂಜೆ ಬಿಟ್ಟಿದ್ದಾರೆ.
ಈ ಪರಿಣಾಮ ಆ ಕಳ್ಳ ಸ್ಥಳೀಯರಿಗೆ, ನಾನು ಮತ್ತೆ ಕಳವು ಮಾಡುತ್ತೇನೆಂದು ಪೊಲೀಸರಿಗೆ ಒಪ್ಪಿಸಿದವರಿಗೆ ಬೆದರಿಕೆ ಹಾಕುತಿದ್ದಾನೆಂದು ಗುರುವಾರ ಪೇಠೆಯ ಸಾರ್ವಜನಿಕರು ನಗರ ಠಾಣೆಯ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳ ಮುಂದೆ ಆರೋಪಿಸಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.
ಅದಲ್ಲದೆ, ಗೋಕಾಕದಲ್ಲಿ ದಿನಾಲು ಗಾಂಜಾ ನಶೆಯಲ್ಲಿರುವ ಯುವಕರಿಂದ ತೊಂದರೆ ಅನುಭವಿಸುವಂತಾಗಿದೆ. ಇದು ಪೊಲೀಸರಿಗೆ ಗೊತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗಾಂಜಾ ನಶೆಯಲ್ಲಿ ಯಾವ ಹೊತ್ತಿನಲ್ಲಿ ಅನಾಹುತ ಮಾಡುತ್ತಾರೋ ಗೊತ್ತಿಲ್ಲ. ನಾವು ಜೀವ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದೇವೆಂದು ಮಾಧ್ಯಮದವರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಗೋಕಾಕದಲ್ಲಿ ದಿನದಿನಕ್ಕೂ ಗಾಂಜಾ ವ್ಯಸನಿಗಳು ಹೆಚ್ಚಾಗುತಿದ್ದು, ದುಶ್ಚಟಗಳಿಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ದಾಸರಾಗುತಿದ್ದಾರೆ. ಪೆಡ್ಲರ್ ಗಳಿಗೆ ಕಡಿವಾಣ ಹಾಕದೆ ಇರುವ ಗೋಕಾಕ ಪೊಲೀಸರು, ಗಾಂಜಾ ನಶೆಯಲ್ಲಿ ಯಾರನ್ನಾದರೂ ಕೊಲೆ ಮಾಡಿದರೆ ಆಗಲೂ ಪೊಲೀಸರು ಮುಂಜಾನೆವರೆಗೆ ಸ್ಟೇಷನ್ ನಲ್ಲಿ ಇಟ್ಟುಕೊಂಡು, ಸಂಜೆ ಬಿಟ್ಟರೂ ಬಿಡಬಹುದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಗೋಕಾಕ ನಗರ ಠಾಣೆ ಪೊಲೀಸರ ಕರ್ತವ್ಯದ ವಿರುದ್ಧ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
PublicNext
10/01/2025 12:40 pm