ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸನಗರ: ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ - ಪಿಡಿಓ ವರ್ಗಾವಣೆಗೆ ಆಗ್ರಹ

ಹೊಸನಗರ: ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಪಿಡಿಓ ಎಸ್.ರವಿ ಕಾಲಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡದೇ, ಪ್ರತಿ ನಿತ್ಯ ಕಚೇರಿಗೆ ಗ್ರಾಮಸ್ಥರು ಅಲೆದಾಡುವಂತೆ ಮಾಡುವ ಮೂಲಕ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಈ ಕುರಿತು ಪಂಚಾಯತಿ ಚುನಾಯಿತ ಸದಸ್ಯರು ಪ್ರಶ್ನಿಸಿದಲ್ಲಿ ಸಮಂಜಸ ಉತ್ತರ ನೀಡದೆ, ಹಾರಿಕೆ ಉತ್ತರ ನೀಡುತ್ತ ಬೇಜವಾಬ್ದಾರಿ ತೋರುತ್ತ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಈ ಕೂಡಲೇ ಪಿಡಿಓ ರವಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಇದೇ ಜನವರಿ 7ರಂದು ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಇಲ್ಲಿನ ತಾಲೂಕು ಪಂಚಾಯತಿ ಕಚೇರಿ ಎದುರು ಗ್ರಾಮಸ್ಥರ ಸಹಿತ ಆಡಳಿತ ಸಮಿತಿ ಧರಣಿಗೆ ಮುಂದಾಗಲಿದೆ ಎಂದು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ತಾಲೂಕು ಪಂಚಾಯತಿ ಕಚೇರಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಪಿಡಿಓ ರವಿ, ಗ್ರಾಮ ಪಂಚಾಯತಿ ಸದಸ್ಯರನ್ನು ಹಗುರವಾಗಿ ಕಾಣುತ್ತಿದ್ದಾರೆ. ಬೇಜವಾಬ್ದಾರಿ ಹೇಳಿಕೆ ನೀಡುತ್ತ ಅಗೌರವ ತೋರುತ್ತಿದ್ದಾರೆ. ಕಳೆದ 2024ರ ನವೆಂಬರ್ 29ರ ಸಾಮಾನ್ಯ ಸಭೆಯ ನಿರ್ಣಯವನ್ನು ಅಜೆಂಡ ರೀತಿ ದಾಖಲಿಸಿಲ್ಲ. ಅಧ್ಯಕ್ಷ ಹಾಗೂ ಸದಸ್ಯರ ಗಮನಕ್ಕೆ ಬಾರದಂತೆ ಸಾರ್ವಜನಿಕರ ಅರ್ಜಿಗಳಿಗೆ ಸಭಾ ನಿರ್ಣಯದಂತೆ ದಾಖಲಿಸದೆ, ಮೂಲ ನಿರ್ಣಯವನ್ನು ತಿರುಚಿ ಜನ ವಿರೋಧಿ ನಿರ್ಣಯ ದಾಖಲಿಸಿರುವುದು ಖಂಡನಾರ್ಹ ಎಂದಿದ್ದಾರೆ.

ಈ-ಸ್ವತ್ತು ಹಾಗೂ ರಶೀದಿ ಪುಸ್ತಕ ಕ್ರಮವಾಗಿ ನಿರ್ವಹಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಇಒ ಅವರಿಗೆ ಕಳೆದ ಡಿಸೆಂಬರ್ 12ರಂದು ಖುದ್ದು ಹಾಜರಾಗಿ ಮನವಿ ಸಲ್ಲಿಸಿದ್ದರೂ ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಪಿಡಿಓ ರವಿ ಅವರನ್ನು ಅಮಾನತುಗೊಳಿಸಿ ಬೇರೆಡೆಗೆ ವರ್ಗಾಹಿಸಬೇಕೆಂದು ಆಗ್ರಹಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/01/2025 03:27 pm

Cinque Terre

6.22 K

Cinque Terre

0

ಸಂಬಂಧಿತ ಸುದ್ದಿ