ಶಿವಮೊಗ್ಗ: ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸದೆ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆರೋಪಿಸಿದರು.
ಶಿವಮೊಗ್ಗ ನಗರದಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅವಧಿ ಮುಗಿದ ಆರು ತಿಂಗಳ ಒಳಗೆ ನಡೆಸಬೇಕೆಂಬ ನಿಯಮವಿದೆ. ಅಲ್ಲದೆ, ಸುಪ್ರೀಂ ಕೋರ್ಟಿನ ಆದೇಶವೂ ಕೂಡ ಇದೆ. ಆದರೆ, ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಇವೆಲ್ಲವನ್ನೂ ಮೀರಿ ಚುನಾವಣೆಯನ್ನು ನಡೆಸದೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಟೀಕಿಸಿದರು.
ನಾವು ಈಗಾಗಲೇ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡಿಲ್ಲ ಎಂಬ ಉತ್ತರವನ್ನು ಆಯೋಗ ನೀಡಿದೆ. ಹಳೆಯ ಮೀಸಲಾತಿಯ ಪ್ರಕಾರವೇ ಚುನಾವಣೆ ನಡೆಸಬಹುದಲ್ಲ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದೆ. ರಾಜ್ಯ ಸರ್ಕಾರವು ಕೂಡ ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಆಗಸ್ಟ್ 8ರಂದು ಚುನಾವಣಾ ಆಯೋಗ ಶಿವಮೊಗ್ಗ, ಮೈಸೂರು ಸೇರಿದಂತೆ ಹಲವು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸುತ್ತೇವೆ ಎಂದು ಸುದ್ದಿಗೋಷ್ಠಿ ಮಾಡಿ ತಿಳಿಸಿದರು. ಆದರೆ, ಇದುವರೆಗೂ ಚುನಾವಣೆಯನ್ನು ನಡೆಸಿಲ್ಲ ಎಂದರು.
PublicNext
06/01/2025 07:24 pm