ಸಾಗರ : ತಹಶೀಲ್ದಾರ್ ನೋಂದಾಯಿತ ಲೇಔಟ್ ಸಮಸ್ಯೆಗೆ ಕಾಲ ಸನ್ನಿಹಿತವಾಗಿದ್ದು, ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಪ್ರಕಟಿಸುವ ಮೂಲಕ ಲೇಔಟ್‌ಗಳಲ್ಲಿ ವಾಸಿಸುತ್ತಿರುವವರಿಗೆ ಬಿ ಖಾತಾ ನೀಡಲು ಅಗತ್ಯ ಸಿದ್ದತೆ ನಡೆಸಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಸಿದ್ದಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಫೆ. 10ರೊಳಗೆ ಬಿ ಖಾತಾ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು ಲೇಔಟ್‌ಗಳಲ್ಲಿ ವಾಸ ಮಾಡುತ್ತಿರುವವರ ಮುಖದಲ್ಲಿ ಸಂತಸ ಮೂಡಲು ಕಾರಣವಾಗಿದೆ ಎಂದರು.
ಅನೇಕ ವರ್ಷಗಳಿಂದ ತಹಸೀಲ್ದಾರ್ ಲೇಔಟ್‌ನಲ್ಲಿ ಮನೆ ಕಟ್ಟಿಕೊಂಡವರು, ನಿವೇಶನ ಖರೀದಿಸಿದವರು ಅಭದ್ರತೆಯಲ್ಲಿದ್ದರು. ಇವರಿಗೆ ಸ್ಥಳೀಯ ಸಂಸ್ಥೆಗಳಿಂದ ಸೇಲ್ ಸರ್ಟಿಫಿಕೇಟ್, ಖಾತೆ ಯಾವುದೂ ಆಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ದಿ ಶುಲ್ಕ ಪಾವತಿಸಿಯೂ ಇವರು ಸರ್ಕಾರಿ ಸೌಲಭ್ಯದಿಂದ, ಬ್ಯಾಂಕ್ ಸಾಲ ಸಿಗದೆ ಪರದಾಡುತ್ತಿದ್ದರು. ಖಾತೆ ಇಲ್ಲದೆ ಇರುವುದರಿಂದ ಇವರನ್ನು ಅನಧಿಕೃತ ವಾಸಿಗಳು ಎಂದೇ ಭಾವಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಇವರಿಗೆ ಬಿ ಖಾತಾ ನೀಡಲು ಮುಂದಾಗಿದ್ದು, ಮುಖ್ಯಮಂತ್ರಿಗಳು ವಿಷಯ ಕುರಿತು ಹೆಚ್ಚು ಮುತುವರ್ಜಿ ವಹಿಸುತ್ತಿರುವುದು ಸಂತೋಷ ತಂದಿದೆ. ಬಿ ಖಾತಾ ಮಾಡಿಕೊಡುವುದರಿಂದ ರಾಜ್ಯದಲ್ಲಿ ತಹಶೀಲ್ದಾರ್ ಲೇಔಟ್‌ನಲ್ಲಿ ವಾಸಿಸುತ್ತಿರುವವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಾಗರ ನಗರವ್ಯಾಪ್ತಿಯಲ್ಲಿ ಇಂತಹ 4ಸಾವಿರ ಪ್ರಕರಣಗಳಿವೆ. ಈ ಪೈಕಿ ಸಾವಿರಕ್ಕೂ ಹೆಚ್ಚು ಜನರು ಮನೆ ಕಟ್ಟಿಕೊಂಡಿದ್ದು, ಮೂರುಸಾವಿರಕ್ಕೂ ಹೆಚ್ಚು ಜನರು ನಿವೇಶನ ಖರೀದಿಸಿದ್ದಾರೆ. ತಹಶೀಲ್ದಾರ್ ಲೇಔಟ್ ಆಗಿರುವುದರಿಂದ ನಿವೇಶನ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮನೆ ಕಟ್ಟಿಕೊಂಡವರಿಗೆ ನಗರಸಭೆ, ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಘಟಕದ ವತಿಯಿಂದ ಕಳೆದ ಜುಲೈ ತಿಂಗಳಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಭೇಟಿಯಾಗಿ ವಿಷಯದ ಗಂಭೀರತೆಯನ್ನು ನಮ್ಮ ವಿಭಾಗ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿತ್ತು. ಶಾಸಕ ಗೋಪಾಲಕೃಷ್ಣ ಬೇಳೂರು ಸಹ ನಮ್ಮ ವಿಭಾಗಕ್ಕೆ ಬೆಂಬಲ ನೀಡಿದ್ದರು. ಮುಖ್ಯಮಂತ್ರಿಗಳು ತಕ್ಷಣ ಬಿ ಖಾತಾ ಮಾಡಿಕೊಡುವ ಕಾನೂನು ತಿದ್ದುಪಡಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿ, ಅತಿಶೀಘ್ರವಾಗಿ ತಹಸೀಲ್ದಾರ್ ಲೇಔಟ್ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ಕಾರ್ಯದರ್ಶಿ ದುರ್ಗಪ್ಪ ಹಾಜರಿದ್ದರು.
Kshetra Samachara
08/01/2025 02:21 pm