ರಿಪ್ಪನ್ ಪೇಟೆ : ಪಟ್ಟಣದ ಬಿಎಸ್ಎನ್ಎಲ್ ಆಫೀಸ್‌ನಲ್ಲಿ ಕೆಲ ಸಮಯದಿಂದ ಆಧಾರ್ ಕಾರ್ಡ್‌ನಲ್ಲಿ ಸಣ್ಣಪುಟ್ಟ ತಿದ್ದುಪಡಿಗಳಿದ್ದರೆ ಅದನ್ನು ಸರಿಪಡಿಸಿಕೊಡಲೆಂದು ರಿಪ್ಪನಪೇಟೆ ಎನ್ರೋಲ್ಮೆಂಟ್ ಎಜೆನ್ಸಿ ಬಿಎಸ್ಏನ್ಎಲ್ ಸರ್ಕಲ್ ಕಡೆಯಿಂದ( ಕ್ಲೈಂಟ್ ಐಡಿ0707/17028/0165) ದುರ್ಗಾ ಎಜೆನ್ಸಿಯವರಿಗೆ ಆಧಾರ್ ತಿದ್ದುಪಡಿಗೆ ಅವಕಾಶ ನೀಡಿದ್ದು ದುರ್ಗಾ ಏಜೆನ್ಸಿಯ ಆಧಾರ್ ಆಪರೇಟರ್ ಶ್ವೇತಾ ಗ್ರಾಹಕರ ಹತ್ತಿರ ದುಪ್ಪಟ್ಟು ಹಣ ಪಡೆದು ಸಾರ್ವಜನಿಕರು ಪ್ರಶ್ನಿಸಿದರೆ ಅವರಿಗೆ ಬೈದು ದುರ್ವರ್ತನೆ ತೋರುತ್ತಿರುವ ಬಗ್ಗೆ ಹೊಸನಗರ ತಹಶೀಲ್ದಾರ್ ಬಳಿ ದೂರು ನೀಡಲಾಗಿದೆ.
ರಿಪ್ಪನ್ ಪೇಟೆಯ ಬಿಎಸ್ಎನ್ಎಲ್ ಆಫೀಸಿಗೆ ಆಧಾರ್ ತಿದ್ದುಪಡಿಗೆಂದು ಬರುವ ಗ್ರಾಹಕರಿಗೆ ಒಂದಿಲ್ಲೊಂದು ಸಂಕಷ್ಟ ಒಂದು ದಿನ ಬಂದರೆ ಒಂದು ದಿನ ಬಾರದ ಏಜೆನ್ಸಿ ಕಡೆಯ ಆಪರೇಟರ್ಗಳು ಯಾವಾಗ ಬರ್ತಾರೆ ಯಾವಾಗ ಹೋಗ್ತಾರೆ ಅನ್ನುವ ಸಣ್ಣ ಸುಳಿವು ಸಿಗುವುದು ಕಷ್ಟವಾಗಿದೆ.
ದೂರದ ಹಳ್ಳಿಗಳಿಂದ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮ ಆಧಾರ್ ಕಾರ್ಡಿನಲ್ಲಿ ಆಗಿರುವ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಲೆಂದು ಕಚೇರಿಗೆ ಬಂದರೆ ಕಚೇರಿಯಲ್ಲಿ ಒಂದು ದಿನ ಇದ್ದರೆ ಒಂದು ದಿನ ಇರದ ಆಪರೇಟರ್ ಗಳು ಯಾವ ಯಾವ ವಾರ ಬರುತ್ತಾರೆ ಎಷ್ಟೋತ್ತಿಗೆ ಬಂದು ಎಷ್ಟೋತ್ತಿಗೆ ಹೋಗುತ್ತಾರೆ ಹೀಗೆ ತಮ್ಮ ಕೆಲಸದ ವೇಳಾಪಟ್ಟಿಯನ್ನೂ ಹಾಕದೆ ರೈತರನ್ನ, ವಯೋವೃದ್ಧರನ್ನ ಹಾಗೂ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದಾರೆ.
ಆಧಾರ್ ತಿದ್ದುಪಡಿಗಾಗಿ ಏನೇನು ದಾಖಲೆಗಳು ಬೇಕು ಎಂದು ಕೇಳಿಕೊಂಡು ಹೋಗಲು ಒಮ್ಮೆ ಬರಬೇಕು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಬಂದು ಇವರನ್ನು ದಿನಗಟ್ಟಲೆ ಕಾಯಬೇಕು, ಹೀಗೆ ಕಾದು ತಿದ್ದುಪಡಿ ಮಾಡಿಸಿಕೊಂಡರೂ ನಿಗದಿಯಾದ ಬೆಲೆಗಿಂತ ದುಪ್ಪಟ್ಟು ಹಣ ನೀಡಬೇಕು ಇದು ರಿಪ್ಪನ್ ಪೇಟೆ ಬಿಎಸ್ಎನ್ಎಲ್ ಕಚೇರಿಯ ಆಧಾರ್ ತಿದ್ದುಪಡಿಯ ವಾಸ್ತವ ಸ್ಥಿತಿ.
Kshetra Samachara
08/01/2025 06:18 pm