ಸಾಗರ : ಜ. 18ರಂದು ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಆಪ್ಸ್ಕೋಸ್, ತೋಟಗರ‍್ಸ್ ಇನ್ನಿತರೆ ಸಂಘಟನೆಗಳ ಸಹಯೋಗದೊಂದಿಗೆ ಬೆಳಿಗ್ಗೆ 10-30ರಿಂದ ಇಂದಿರಾಗಾಂಧಿ ಕಾಲೇಜಿನ ಪಕ್ಕದ ಸಂತೇ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದರು.
ರಾಜ್ಯ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಗೌರವ ಸಮರ್ಪಣೆಯನ್ನು ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ವಸ್ತುಪ್ರದರ್ಶನ ಉದ್ಘಾಟನೆ ನಡೆಸಲಿದ್ದು, ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಿದ್ದು, ಸಂಘದ ಹಿಂದಿನ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ವೇದಿಕೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರಗ ಜ್ಞಾನೇಂದ್ರ, ಪ್ರಮುಖರಾದ ಆರ್.ಎಂ.ಮಂಜುನಾಥ ಗೌಡ, ಎಚ್.ಹಾಲಪ್ಪ ಹರತಾಳು, ವಿದ್ಯಾಧರ, ಭೀಮೇಶ್ವರ ಜೋಷಿ, ಡಾ. ಎಸ್.ರಾಮಪ್ಪ, ಕಿಶೋರ ಕುಮಾರ್ ಕೊಡ್ಗಿ, ವೈ.ಎಸ್.ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಅಡಿಕೆ ಬೆಳೆಗಾರರ ಸಮಾವೇಶದ ಮೂಲಕ ವಿದೇಶಿ ಅಡಿಕೆ ಆಮದು ನಿಯಂತ್ರಣಕ್ಕೆ ಹಕ್ಕೊತ್ತಾಯ ಮಂಡಿಸುವುದು, ಅಡಿಕೆಗೆ ಬರುವ ರೋಗಬಾಧೆ ಪರಿಹಾರಕ್ಕೆ ಔಷದೋಪಾಯ ಕಂಡು ಹಿಡಿಯುವುದು, ವನ್ಯಜೀವಿಗಳ ಹಾವಳಿ ತಡೆಗಟ್ಟಲು ಒತ್ತಾಯಿಸುವುದು, ಅಡಿಕೆ ಬೆಳೆಗಾರರ ಸೊಪ್ಪಿನ ಬೆಟ್ಟದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ರಾಷ್ಟ್ರೀಯ ಅಡಿಕೆ ಮಂಡಳಿ ರಚನೆಗೆ ಒತ್ತಾಯಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎದುರಿಗೆ ಇರಿಸಲು ಚಿಂತನೆ ನಡೆಸಲಾಗಿದೆ. ಸಮಾವೇಶದಲ್ಲಿ ಸಾಗರ, ಹೊಸನಗರ, ಸೊರಬ ತಾಲ್ಲೂಕು ಸೇರಿದಂತೆ ಶಿವಮೊಗ್ಗ, ಅಕ್ಕಪಕ್ಕದ ಜಿಲ್ಲೆಯ ಸುಮಾರು 15ಸಾವಿರಕ್ಕೂ ಹೆಚ್ಚಿನ ಅಡಿಕೆ ಬೆಳೆಗಾರರ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಸಮಾವೇಶದ ಸಂಚಾಲಕ ಯು.ಎಚ್.ರಾಮಪ್ಪ , ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ರಾಜೇಂದ್ರ ಖಂಡಿಕಾ, ಕಲಸೆ ಚಂದ್ರಪ್ಪ, ಆರ್.ಎಸ್.ಗಿರಿ, ಶರಾವತಿ ಸಿ. ರಾವ್ ಇನ್ನಿತರರು ಹಾಜರಿದ್ದರು.
Kshetra Samachara
09/01/2025 03:51 pm