ಶಿವಮೊಗ್ಗ : ನಗರ ಪ್ರದೇಶದಲ್ಲಿ ಪ್ರದೇಶವಾರು ಸ್ಥಳೀಯ ಸಂಸ್ಥೆಗಳು ಬಿಡಾಡಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅದಿಕಾರಿಗಳ ಸಭೆ ನಡೆಸಿದ ಅವರು, ನಾಯಿ ಕಡಿತದಿಂದಾಗುವ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿಯೂ ನಾಯಿ ಮತ್ತು ಸಾಕು ನಾಯಿ ಕಡಿತದ ಕುರಿತು ಜಾಗೃತಿ ಮೂಡಿಸಬೇಕೆಂದರು.
ಡಿಹೆಚ್‌ಓ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ 2024 ರಲ್ಲಿ 26950 ನಾಯಿ ಕಡಿತ ಪ್ರಕರಣಗಳಿದ್ದು, 4 ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ನಾಯಿಕಡಿತ ಮತ್ತು ರೇಬಿಸ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ರೇಬಿಸ್ ಬಂದ ಮೇಲೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಮುಂಜಾಗ್ರತಾ ಕ್ರಮ ಅತ್ಯಗತ್ಯವಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಹಾಗೂ ಸಾರ್ವಜನಿಕರು ತಮ್ಮ ಸಾಕು ನಾಯಿ, ಪ್ರಾಣಿಗಳಿಗೆ ಲಸಿಕೆ ಹಾಕಿಸಬೇಕು. ನಾಯಿ ಇತರೆ ಸಾಕು ಪ್ರಾಣಿ ಕಡಿತದ ತಕ್ಷಣ ಆಸ್ಪತ್ರೆಗೆ ತೆರಳಿ ಆಂಟಿ ರೇಬಿಸ್ ಲಸಿಕೆ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ಜಿಲ್ಲೆಯಲ್ಲಿ ಹಾವು ಕಡಿತ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಹಾವು ಕಡಿತದಿಂದ ರಕ್ಷಣೆ ಪಡೆಯುವುದು, ಹಾವು ಕಡಿತದ ನಂತರ ಅನುಸರಿಸಬೇಕಾದ ಕ್ರಮಗಳು, ಮುನ್ನೆಚ್ಚರಿಕೆ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
Kshetra Samachara
09/01/2025 05:07 pm