ಶಿವಮೊಗ್ಗ: ಜನವರಿ 2ರ6 ಗಣರಾಜ್ಯೋತ್ಸವದಂದು ನಮ್ಮ ದೇಶದ ಪ್ರತಿಷ್ಠಿತ, ಹೆಮ್ಮೆಯ ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್‍ಎಕ್ಸ್ 1878 ಜಿ.ಎಂ. ನಗರದ ಫ್ರೀಡಂ ಪಾರ್ಕ್‍ನಲ್ಲಿ ಶಾಶ್ವತವಾಗಿ ಸ್ಥಾಪನೆಗೊಳ್ಳಲಿದೆ.
ಕಳೆದ ಒಂದು ವರ್ಷದಿಂದ ಎಂ.ಆರ್.ಎಸ್. ಸರ್ಕಲ್‍ನಲ್ಲಿ ಧೂಳು ಹಿಡಿಯುತ್ತ ನಿಂತಿದ್ದ ಯುದ್ಧ ಟ್ಯಾಂಕರ್‌ಗೆ ಕೊನೆಗೂ ಸೂಕ್ತ ಜಾಗ ದೊರಕಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಯಶಸ್ವಿಯಾಗಿದೆ. ಆಗಸ್ಟ್ 13, 2023ರಂದು ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಯುದ್ಧ ಟ್ಯಾಂಕರ್‌ಅನ್ನು ಬರಮಾಡಿಕೊಳ್ಳಲಾಗಿತ್ತು. ಜನಪ್ರತಿನಿಧಿಗಳು, ಎನ್‍ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿವಮೊಗ್ಗದ ನಾಗರಿಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ತಾತ್ಕಲಿಕವಾಗಿ ಎಂ.ಆರ್.ಎಸ್. ವೃತ್ತದ ಬಳಿ ಇದನ್ನು ಇಡಲಾಗಿತ್ತು. ಶಾಶ್ವತವಾಗಿ ಎಲ್ಲಿ ಸ್ಥಾಪಿಸಬೇಕು ಎನ್ನುವ ಚರ್ಚೆ ನಡೆದಿತ್ತು. ಇನ್ನೊಂದು ಯುದ್ಧ ವಿಮಾನ ಕೂಡ ನಗರಕ್ಕೆ ಆಗಮಿಸಲಿದ್ದು, ಅಂತಿಮವಾಗಿ ಎರಡನ್ನು ನಗರದ ಫ್ರೀಡಂ ಪಾರ್ಕ್ ನಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಇದಕ್ಕೆ ಪೂರಕವಾಗಿ ಕಟ್ಟೆಯನ್ನು ಕೂಡ ನಿರ್ಮಿಸಲಾಗಿದ್ದು, ಟ್ಯಾಂಕರ್ ನ್ನು ಸ್ಥಾಪಿಸಲಾಗಿದೆ. ಈಗ ಅದಕ್ಕೆ ಮೂಲ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
1983-84ರವರೆಗೆ ಈ ಟ್ಯಾಂಕರ್ ಸೇವೆಯಲ್ಲಿತ್ತು. ಅದು ನಿಷ್ಕ್ರಿಯಗೊಂಡ ಬಳಿಕ ಅದನ್ನು ರಕ್ಷಣಾ ಇಲಾಖೆಯ ಅನುಮತಿ ಪಡೆದು ಇಲ್ಲಿಗೆ ತರುವುದು ಸಾಹಸದ ಕೆಲಸವಾಗಿತ್ತು, ಸಂಸದ ಬಿ.ವೈ.ರಾಘವೇಂದ್ರ ಮತ್ತು ಸೈನಿಕ ಇಲಾಖೆಯ ಅಂದಿನ ಉಪನಿರ್ದೇಶಕರಾದ ಡಾ.ಸಿ.ಎಸ್.ಹೀರೇಮಠ್ ಮತ್ತು ಜಿಲ್ಲಾ ಮಾಜಿ ಸೈನಿಕರ ಸಂಘದ ಸತತ ಪ್ರಯತ್ನದಿಂದ ಈ ಕಾರ್ಯ ಯಶಸ್ವಿಯಾಗಿದೆ. ಯುವಕ ಯುವತಿಯರಿಗೆ ದೇಶ ಪ್ರೇಮ ಮತ್ತು ಸೈನ್ಯಕ್ಕೆ ಭರ್ತಿಯಾಗಲು ಪ್ರೇರಣೆ ನೀಡುವ ಈ ಯುದ್ಧ ಟ್ಯಾಂಕರ್‍ನ ಸ್ಥಾಪನೆ ಕಾರ್ಯಕ್ಕೆ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 26, 2025ರಂದು ಸಕಲ ಗೌರವಗಳೊಂದಿಗೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
PublicNext
09/01/2025 04:39 pm