ಶಿವಮೊಗ್ಗ: ವಿದ್ಯಾರ್ಥಿಯ ಸಂಪೂರ್ಣ ವಿವರವುಳ್ಳ ‘ಅಪಾರ್’ ಯುನಿಕ್ ಗುರುತಿನ ಚೀಟಿ ಪಡೆಯಲು ಹಾಗೂ ಇತರೆ ಸೇವೆ-ಸೌಲಭ್ಯ ಪಡೆಯಲು ವಿದ್ಯಾರ್ಥಿಗಳ ಆಧಾರ್ ಏಕರೂಪತೆ ಅತಿ ಅವಶ್ಯಕವಾಗಿರುವುದರಿಂದ ವಿದ್ಯಾರ್ಥಿಗಳ ಬೃಹತ್ ಆಧಾರ್ ತಿದ್ದುಪಡಿ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಹೇಮಂತ್ ಎನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಎಸ್‌ಸಿ ಸರ್ವೀಸಸ್ ಇಂಡಿಯಾ ಲಿಮಿಟೆಡ್, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಾಚಿನಕಟ್ಟೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಮಾಹಿತಿಯು ಶಾಲೆಗಳಲ್ಲಿ ಹಾಗೂ ಆಧಾರ್ ಕಾರ್ಡ್ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು, ತಂದೆ ಹೆಸರು, ಇತರೆ ಮಾಹಿತಿ ವ್ಯತ್ಯಾಸ ಇರಬಾರದು. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆಧಾರ್ ತಿದ್ದುಪಡಿ ಅನುಕೂಲಕಾರಿಯೂ ಆಗಿರುತ್ತದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಎಲ್ಲ ವಿವರಗಳುಳ್ಳ ಯುನಿಕ್ ಗುರುತಿನ ಚೀಟಿಯಾದ ‘ಅಪಾರ್’ ನ್ನು ನೀಡುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಸಕಲ ಮಾಹಿತಿ ಲಭ್ಯವಾಗಲಿದೆ. ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ಜಿಲ್ಲೆ, ಬೇರೆ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವ ಸಂದರ್ಭ ಒದಗಿ ಬಂದಾಗ ಈ ಅಪಾರ್ ಕಾರ್ಡ್ ಅನುಕೂಲವಾಗುತ್ತದೆ. ಒಂದು ಬಾರಿ ಈ ಕಾರ್ಡ್ನಲ್ಲಿ ಶಾಲಾ ದಾಖಲಾತಿಗಳಾದ ವರ್ಗಾವಣೆ ಪ್ರಮಾಣ ಪತ್ರ, ಅಂಕಪಟ್ಟಿಗಳು ಅಪ್‌ಲೋಡ್ ಮಾಡಿದರೆ ಸಾಕು ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಂಡರೂ ಈ ಕಾರ್ಡ್ ಮೂಲಕ ಸುಲಭವಾಗಿ ತಮ್ಮ ಮೂಲ ದಾಖಲಾತಿಗಳು ಪಡೆಯಬಹುದು. ಈ ಅಪಾರ್ ನೋಂದಣಿ ಮಾಡಲು ಆಧಾರ್ ಮತ್ತು ಶಾಲಾ ದಾಖಲಾತಿ ಏಕರೂಪದಲ್ಲಿ ಇರಬೇಕು ಎಂದರು
Kshetra Samachara
02/01/2025 02:21 pm