ಕುಂದಾಪುರ: ಗ್ರಾಮ ಪಂಚಾಯಿತ್‌ನ ನಿರ್ಲಕ್ಷ್ಯ ಮತ್ತು ಪಕ್ಷಪಾತ ಧೋರಣೆಯಿಂದ ಕಳೆದ ಒಂದೂವರೆ ವರ್ಷದಿಂದ ಪಂಚಾಯತ್ ಅಂಗಡಿ ಕೋಣೆಯ ಕನಸು ಕಂಡು ದೌರ್ಜನ್ಯಕ್ಕೊಳಗಾದ ಘಟನೆ ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮ ಪಂಚಾಯಿತಿನಲ್ಲಿ ನಡೆದಿದೆ. ಬಸ್ರೂರಿನ ಮಂಜುನಾಥ್ ಶೆಟ್ಟಿಗಾರ್ ಎಂಬುವವರೇ ಗ್ರಾಮ ಪಂಚಾಯಿತಿಯಿಂದ ದೌರ್ಜನ್ಯಕೊಳಗಾದವರು.
ಬಸ್ರೂರು ಗ್ರಾಮ ಪಂಚಾಯತ್ ಕಳೆದ ವರ್ಷ ಜೂನ್ ತಿಂಗಳಲ್ಲಿ ಮಂಜುನಾಥ್ ಶೆಟ್ಟಿಗಾರ ಅವರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ ಕೋಣೆ ಸಂಖ್ಯೆ 27ನ್ನು 18000 ಮುಂಗಡ ಹಣ ಹಾಗೂ 3000 ಬಾಡಿಗೆ ಎಂದು ವಸೂಲಿ ಮಾಡಿ ಮಂಜುನಾಥ ಶೆಟ್ಟಿಗಾರ್ ಅವರಿಗೆ ನೀಡಿತ್ತು. ಮಂಜುನಾಥ್ ಶೆಟ್ಟಿಗಾರ್ ಅಂಗಡಿ ಕೋಣೆಯನ್ನು ಸಾಲ ಮಾಡಿ ಸುಮಾರು 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ದುರಸ್ತಿಗೊಳಿಸಿದ್ದರು. ಆದರೆ ಗ್ರಾಮ ಪಂಚಾಯತ್ ಮಾತ್ರ ಮಂಜುನಾಥ್ ಶೆಟ್ಟಿಗಾರ್ ಅವರಿಗೆ ಅಂಗಡಿ ಕೋಣೆಗೆ ಲೈಸನ್ಸ್ ನೀಡಿರಲಿಲ್ಲ.
ಈ ಬಗ್ಗೆ ಗ್ರಾಮ ಪಂಚಾಯಿತಿನಲ್ಲಿ ವಿಚಾರಿಸಿದಾಗ ಅಂಗಡಿ ಕೋಣೆಯನ್ನು ವಿದ್ಯಾ ಕುಮಾರಿ ಎಂಬುವರ ಹೆಸರಿನವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹಲವು ಮನವಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಮಂಜುನಾಥ್ ಶೆಟ್ಟಿಗಾರ್ ಆರೋಪಿಸಿದ್ದಾರೆ.
ಇತ್ತ ಪಂಚಾಯತಿಗೆ ಕಟ್ಟಿದ ಹಣವನ್ನೂ ನೀಡದೆ, ಅಂಗಡಿ ಕೋಣೆ ದುರಸ್ತಿಯ ವೆಚ್ಚವನ್ನು ನೀಡದೆ, ಅಂಗಡಿ ಕೋಣೆಯನ್ನೂ ನೀಡದೆ ಗ್ರಾಮ ಪಂಚಾಯಿತಿ ಅನ್ಯಾಯ ನಡೆಸುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಜುನಾಥ್ ಶೆಟ್ಟಿಗಾರ್ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್‌ನ ನಡೆಗೆ ಬಸ್ರೂರು ಗ್ರಾಮಸ್ಥರು ಪಕ್ಷ ಬೇಧ ಮರೆತು ಆಕ್ರೋಶ ಹೊರ ಹಾಕುತ್ತಿದ್ದು, ಮಂಜುನಾಥ್ ಶೆಟ್ಟಿಗಾರ್‌ಗೆ ನ್ಯಾಯ ಸಿಗದೇ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ.
ಜಯಶೇಖರ್ ಮಾಡಪಾಡಿ ಪಬ್ಲಿಕ್ ನೆಸ್ಟ್ ,ಕುಂದಾಪುರ
PublicNext
10/01/2025 07:56 am