ಮಂಗಳೂರು: ನಗರದ ವಾಮಂಜೂರು ಬಳಿಯ ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿ ಯುವಕನೋರ್ವನು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನು ಕಥೆ ಕಟ್ಟಿ ಎರಡೆರಡು ಬಾರಿ ನಮ್ಮ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾನೆಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜ.6ರಂದು ಸಂಜೆ ಅದ್ದು ಅಲಿಯಾಸ್ ಬದ್ರುದ್ದೀನ್ (34) ಎಂಬಾತ ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಪರೀಕ್ಷಿಸುತ್ತಿದ್ದ. ಈ ವೇಳೆ ಆತ ಟ್ರಿಗ್ಗರ್ ಒತ್ತಿದ್ದಾನೆ. ಪರಿಣಾಮ ಫೈರ್ ಆಗಿ ಅಂಗಡಿಯಲ್ಲಿ ಕುಳಿತಿದ್ದ ಮೊಹಮ್ಮದ್ ಸಫ್ವಾನ್ (25) ಎಂಬಾತನಿಗೆ ಗುಂಡು ತಗುಲಿದೆ. ಗಾಯಗೊಂಡ ಆತನನ್ನು ಜನಪ್ರಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಸದ್ಯ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯು ಎರಡೆರಡು ಬಾರಿ ಪೊಲೀಸರ ತನಿಖೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾನೆ. ಮೊದಲು ಗಾಯಾಳು ಸಫ್ವಾನ್ ಕೈಯಲ್ಲಿರುವಾಗಲೇ ಪಿಸ್ತೂಲ್‌ನಿಂದ ಮಿಸ್ ಫೈರ್ ಆಗಿ ಗುಂಡು ಹೊಟ್ಟೆಗೆ ತಗುಲಿ ಗಾಯವಾಗಿದೆ ಎಂದು ಗಾಯಾಳು ಯುವಕನಿಂದಲೇ ಸುಳ್ಳು ಹೇಳಿಕೆ ಹೇಳಿಸಿದ್ದನು. ತನಿಖೆ ನಡೆಸಿದಾಗ ಇದು ಸುಳ್ಳು ಎಂದು ತಿಳಿದು ಬಂತು. ಅದಕ್ಕಾಗಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದೆವು.
ಆ ಬಳಿಕ ಮತ್ತೊಂದು ಕತೆ ಕಟ್ಟಲು ಶುರು ಮಾಡಿದ್ದಾನೆ. ಈ ಪಿಸ್ತೂಲ್ ಬಜ್ಪೆಯ ಭಾಸ್ಕರ್ ಎಂಬ ವ್ಯಕ್ತಿಯದ್ದು, ಆತ ಅದನ್ನು ಬಿಟ್ಟು ಹೋಗಿದ್ದ. ಘಟನೆ ನಡೆದ ಬಳಿಕ ಆತ ಈ ರೀತಿಯ ಕಥೆ ಕಟ್ಟಿ ಹೇಳಲು ತಿಳಿಸಿದ್ದ ಎಂದು ತಿಳಿಸಿದ್ದನು ಎಂದು ಹೇಳಿದ್ದಾನೆ. ಆಗ ಅಲರ್ಟ್ ಆದ ಪೊಲೀಸರು ಬದ್ರುದ್ದೀನ್‌ನನ್ನು ವಶಕ್ಕೆ ತೆಗೆದುಕೊಂಡು ಸರಿಯಾಗಿ ತನಿಖೆ ನಡೆಸಿದಾಗ ಸತ್ಯ ಸಂಗತಿ ಹೊರಬಿದ್ದಿದೆ.
ಈ ಪರವಾನಿಗೆ ಇಲ್ಲದ ಪಿಸ್ತೂಲ್ ಅನ್ನು ಮೂಡುಶೆಡ್ಡೆ ನಿವಾಸಿ ಇಮ್ರಾನ್ ಎಂಬಾತ ಅದ್ದು ಅಲಿಯಾಸ್ ಬದ್ರುದ್ದೀನ್‌ನಿಗೆ ನೀಡಿದ್ದನು. ಇಮ್ರಾನ್‌ಗೆ ಈ ಪಿಸ್ತೂಲ್ ಕೇರಳ ಮೂಲದ ವ್ಯಕ್ತಿಯಿಂದ ದೊರಕಿದೆ. ಇದೀಗ ಪೊಲೀಸ್ ತಂಡ ಆತನನ್ನು ತಲಾಶ್ ಮಾಡಲು ಕೇರಳದಲ್ಲಿ ಹುಡುಕಾಡುತ್ತಿದೆ. ಸದ್ಯ ಬದ್ರುದ್ದೀನ್‌ನನ್ನು ಅರೆಸ್ಟ್ ಮಾಡಲಾಗಿದೆ. ಆತ ರೌಡಿಶೀಟರ್ ಎಂಬ ಮಾಹಿತಿಯಿದೆ. ಸಫ್ವಾನ್ ಕೂಡಾ ಈತನ ತಂಡದವನೇ ಆಗಿದ್ದು ಆದ್ದರಿಂದ ಇವರು ತಮ್ಮನ್ನು ದಾರಿತಪ್ಪಿಸಲು ಯತ್ನಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
PublicNext
09/01/2025 07:12 pm