ಸಾಗರ : ಇಲ್ಲಿಯವರೆಗೆ ನಾವು ಅರ್ಧ ಇತಿಹಾಸವನ್ನು ಮಾತ್ರ ತಿಳಿದು ಕೊಂಡಿದ್ದೇವೆ. ಅರ್ಧ ಇತಿಹಾಸವೇ ನೈಜ ಇತಿಹಾಸ ಎಂದು ಪೂರ್ಣ ತಿಳಿಯುವ ಕೆಲಸ ನಾವು ಮಾಡುತ್ತಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಕೊಟ್ರೇಶ್ ಎಂ ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಭಾನುವಾರ ಸಹೃದಯ ಬಳಗ, ತಾಲ್ಲೂಕು ಇತಿಹಾಸ ವೇದಿಕೆ, ಕೆಳದಿ ರಿಸರ್ಚ್ ಫೌಂಡೇಶನ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಆರನೇ ಇತಿಹಾಸ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತಿಹಾಸದ ಮೇಲೆ ಪೂರ್ಣ ಪ್ರಮಾಣದ ಬೆಳಕು ಚೆಲ್ಲುವ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ನಾವು ಅನ್ನದ ಋಣ ತೀರಿಸಲು ಬ್ರಿಟೀಷರ ಕಾಲದಲ್ಲಿ ಬರೆದ ಇತಿಹಾಸವನ್ನು ಮಾತ್ರ ಓದಿದ್ದೇವೆ. ಆದರೆ ಅದು ನಿಜವಾದ ಇತಿಹಾಸವಲ್ಲ. ಭಾರತದ ನಿಜವಾದ ಇತಿಹಾಸ ತಿಳಿದಾಗ ಮಾತ್ರ ಭಾರತದ ಪರಂಪರೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಮೇಲೆ ಒತ್ತಾಯಪೂರ್ವಕವಾಗಿ ಹೇರಿದ ಇತಿಹಾಸ ಕೃತಿಗಳು ನಮಗೆ ಪೂರ್ಣ ಇತಿಹಾಸದ ವಿವರಣೆ ನೀಡಲಾರದು. ಭಾರತದ ಇತಿಹಾಸ ಭೋಗದ ಇತಿಹಾಸ ಎಂದು ಚಿತ್ರತವಾಗಿದೆ. ಆದರೆ ನಿಜವಾಗಿಯೂ ಭಾರತದ್ದು ಭಾಗ್ಯದ ಇತಿಹಾಸ ಎಂದರು.
ಸಾಗರ ತಾಲ್ಲೂಕು ಇತಿಹಾಸ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಈತನಕ ತಾಲ್ಲೂಕಿನಲ್ಲಿ 257 ಶಾಸನಗಳು ಪತ್ತೆಯಾಗಿದ್ದು ಇತಿಹಾಸದ ಹೊಳಹುಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ. ರಾಜ್ಯದ ಯಾವ ತಾಲ್ಲೂಕಿನಲ್ಲಿಯೂ ತಾಲ್ಲೂಕು ಮಟ್ಟದ ಸಮ್ಮೇಳನ ನಡೆದು ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿಲ್ಲ. ಆದರೆ ಸಾಗರದ ಪ್ರಜ್ಞಾವಂತರು ಇತಿಹಾಸ ಸಮ್ಮೇಳನ ನಡೆಸುವ ಮೂಲಕ ತಮ್ಮೂರಿನ ಇತಿಹಾಸ ಅರಿಯುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.
Kshetra Samachara
05/01/2025 03:31 pm