ಚಿಕ್ಕಮಗಳೂರು: ಆಟವಾಡುತ್ತಿದ್ದ ಮಕ್ಕಳಿಬ್ಬರು ಆಯತಪ್ಪಿ ರಿಂಗ್ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪ ತಾಲ್ಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ನಡೆದಿದೆ. ಎಸ್ಟೇಟ್ ಗೆ ಕೂಲಿ ಕೆಲಸಕ್ಕೆಂದು ಮಧ್ಯಪ್ರದೇಶದಿಂದ ಬಂದಿದ್ದ ವಲಸೆ ಕಾರ್ಮಿಕ ಕುಟುಂಬವೊಂದರ 5 ಹಾಗೂ 2 ವರ್ಷದ ಇಬ್ಬರು ಬಾಲಕಿಯರು ಆಟವಾಡುವಾಗ ಆಯ ತಪ್ಪಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಪೋಷಕರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು ಸಂಜೆ ತೋಟದಿಂದ ಕೆಲಸ ಮುಗಿಸಿ ಬಂದ ತಾಯಿ ಮಕ್ಕಳು ಕಾಣಿಸದಿದ್ದಾಗ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಅಲ್ಲೇ ಇದ್ದ ಬಾವಿಯೊಂದರಲ್ಲಿ ಮಕ್ಕಳಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶವ ಮೇಲೆತ್ತುವ ಕಾರ್ಯಾಚರಣೆ ನಡೆದಿದ್ದು, ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
11/12/2024 10:32 am