ಡೆಮಾಸ್ಕಸ್: ಸಿರಿಯಾದಲ್ಲಿ 24 ವರ್ಷಗಳ ಬಶರ್ ಅಲ್-ಅಸ್ಸಾದ್ ಸರ್ಕಾರದ ಪತನವಾಗಿದೆ. ಇದೀಗ ನರಕ ಸದೃಶ್ಯದಂತಿದ್ದ ಮತ್ತು ಮಾನವ ಕಸಾಯಿಖಾನೆ ಎಂದು ಕುಖ್ಯಾತಿ ಪಡೆದಿದ್ದ ಸೈದ್ನಾಯಾ ಜೈಲಿನಿಂದ ಸಾವಿರಾರು ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಈ ಕಾರಾಗೃಹದ ಕ್ರೂರತೆಯ ಮೇಲೆ ಬೆಳಕು ಚೆಲ್ಲುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
13 ವರ್ಷಗಳ ಅಂತರ್ಯುದ್ಧ, ಅಸಾದ್ ಮನೆತನದ ಅರ್ಧ ಶತಮಾನದ ಆಳ್ವಿಕೆಯಲ್ಲಿ ಕಣ್ಮರೆಯಾದವರನ್ನು ಹುಡುಕಲು ಸಿರಿಯನ್ನರು ಸೈದ್ನಾಯಾ ಜೈಲಿಗೆ ಧಾವಿಸಿದ್ದಾರೆ. ಬ್ಲೂಮ್ಬರ್ಗ್ ಪ್ರಕಾರ, ಇಸ್ಲಾಮಿಸ್ಟ್ ರಾಜಕೀಯ ಭಿನ್ನಮತೀಯರನ್ನು ಬಂಧಿಸಲು ಈ ಜೈಲನ್ನು ಬಳಸಲಾಗುತ್ತಿತ್ತು.
ಸೈದ್ನಾಯಾ ಜೈಲಿನಲ್ಲಿ ಕೈದಿಗಳಿಗೆ ಕ್ರೂರ ಶಿಕ್ಷೆ ನೀಡಲಾಗುತ್ತಿತ್ತು. ಈ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಅಸ್ಥಿಪಂಜರದಂತೆ ಕಂಡು ಬಂದಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಸದ್ಯ ಅಧಿಕಾರಿಗಳು ಜೈಲಿನ ಗೋಡೆಗಳನ್ನು ಒಡೆಯಲು ಯತ್ನಿಸುತ್ತಿದ್ದು, ರಹಸ್ಯ ಕೋಣೆಗಳು, ನೆಲ ಮಳಿಗೆಗಳು ಇವೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ.
ಡಮಾಸ್ಕಸ್ ಬಳಿಯ ಆಸ್ಪತ್ರೆಯ ಶವಾಗಾರದಲ್ಲಿ ಸುಮಾರು 40 ಶವಗಳನ್ನು ಅಲ್ಲಿ ರಾಶಿ ಹಾಕಲಾಗಿತ್ತು ಎಂದು ಬಂಡುಕೋರ ಬಣಗಳ ಹೋರಾಟಗಾರ ಮೊಹಮ್ಮದ್ ಅಲ್-ಹಜ್ ತಿಳಿಸಿದ್ದಾರೆ.
ಇಂಗ್ಲೆಂಡ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಪ್ರಕಾರ, ಸೈದ್ನಾಯಾ ಜೈಲಿನಲ್ಲಿ ಚಿತ್ರಹಿಂಸೆ ಅಥವಾ ಭಯಾನಕ ಪರಿಸ್ಥಿತಿಗಳಿಂದಾಗಿ ಕನಿಷ್ಠ 60,000 ಜನರು ಸಾವನ್ನಪ್ಪಿದ್ದಾರೆ. ಬಶರ್ ಅಲ್-ಅಸ್ಸಾದ್ ಆಳ್ವಿಕೆಯಲ್ಲಿ ಬಳಲುತ್ತಿದ್ದ ಸಾವಿರಾರು ಮಂದಿ ಈ ಜೈಲಿನಲ್ಲಿದ್ದರು ಎಂದು ಹೇಳಲಾಗುತ್ತಿದೆ.
PublicNext
11/12/2024 04:44 pm