ಧಾರವಾಡ: ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ್ ಯುವಕ ಮಂಡಳದ ಸದಸ್ಯರು ಹಾರೋಬೆಳವಡಿ ಗ್ರಾಮ ಪಂಚಾಯ್ತಿಯ ಬಾಗಿಲು ಮುಚ್ಚಿ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ಶಾಸನಬದ್ಧವಾಗಿ ಅನುದಾನ ಇದೆ. ಆ ಅನುದಾನವನ್ನು ಪಂಚಾಯ್ತಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅಮೃತ ದೇಸಾಯಿ ಅವರು ಶಾಸಕರಿದ್ದ ಸಂದರ್ಭದಲ್ಲಿ 40 ಲಕ್ಷ ರೂಪಾಯಿ ಅನುದಾನವನ್ನು ಯಾವುದೇ ಕಾಮಗಾರಿ ಇಲ್ಲದೇ ಪಂಚಾಯ್ತಿಯವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೂಡಲೇ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಬರಬೇಕಾದ ಅನುದಾನವನ್ನು ಕಾನೂನು ಪ್ರಕಾರ ನೀಡಬೇಕು ಎಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪಂಚಾಯ್ತಿ ಬಾಗಿಲು ಮುಚ್ಚಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.
ಕೊನೆಗೆ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಪಿಡಿಓ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದರು. ಸದ್ಯ ಕಬ್ಬೇನೂರು ಮತ್ತು ಹಾರೋಬೆಳವಡಿ ಸೇರಿ ಎರಡು ಗ್ರಾಮಗಳ ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಅನುದಾನವಿದ್ದು, ಅದನ್ನು ಎರಡೂ ಗ್ರಾಮಗಳಿಗೆ ವಿಂಗಡಣೆ ಮಾಡಿ ಅನುದಾನ ಬಳಕೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರವೇ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಕೈಬಿಟ್ಟು ಪಂಚಾಯ್ತಿ ಸಿಬ್ಬಂದಿಯ ಕೆಲಸಕ್ಕೆ ಅನುವು ಮಾಡಿಕೊಟ್ಟರು.
Kshetra Samachara
04/12/2024 07:05 pm