ಬೆಂಗಳೂರು : ಉದ್ಯಮಿಯೊಬ್ಬರಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಚೈತ್ರಾ ಕುಂದಾಪುರ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನ್ಯಾಯಾಲಯಕ್ಕೆ ಅಥವಾ ಪ್ರಾಸಿಕ್ಯೂಷನ್‌ಗೆ ತಿಳಿಸದೇ ಜಾಮೀನು ಷರತ್ತು ಉಲ್ಲಂಘಿಸಿರುವುದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರವು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೆಟ್ಟಿಲೇರಿದೆ. ಈ ಸಂಬಂಧ ಚೈತ್ರಾಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಜಾಮೀನು ರದ್ದತಿ ಸಂಬಂಧ ಕೇಂದ್ರೀಯ ಅಪರಾಧ ದಳ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಿ ಡಿ ಪ್ರಕಾಶ್ ವಿಚಾರಣೆ ನಡೆಸಿದರು.
ನ್ಯಾಯಾಲಯದ ಹಿಂದಿನ ನಿರ್ದೇಶನದ ಹಿನ್ನೆಲೆ ಚೈತ್ರಾ, ಚನ್ನನಾಯಕ್ ಅಲಿಯಾಸ್ ನಾಯಕ್, ಶ್ರೀಕಾಂತ್ ಮತ್ತು ಪ್ರಜ್ವಲ್ ನಿನ್ನೆ ಖುದ್ದು ಹಾಜರಾಗಿದ್ದರು. ಇತರೆ ಆರೋಪಿಗಳಾದ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರ್, ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಅಲಿಯಾಸ್ ಜಿ ಎಂ ಅಭಿವನ್ ಶ್ರೀ ಹಾಲವೀರಪ್ಪಜ್ಜ, ರಮೇಶ್ ಮತ್ತು ಧನರಾಜ್ ಅವರಿಗೆ ವಿಚಾರಣೆಯಿಂದ ವಿನಾಯಿತಿ ನೀಡಿತು.
ಸಿಆರ್‌ಪಿಸಿ ಸೆಕ್ಷನ್ 317 ಅಡಿ ಅರ್ಜಿ ಸಲ್ಲಿಸುವ ಮೂಲಕ ಚೈತ್ರಾ ಅವರು ತಾನು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಭಾಗವಹಿಸಿರುವುದಾಗಿ ತಿಳಿಸಿದ್ದಾರೆ. ವಿನಾಯಿತಿ ಅರ್ಜಿ (ಎಕ್ಸಮ್ಷನ್ ಅರ್ಜಿ) ಸಲ್ಲಿಸುವವರೆಗೂ ಚೈತ್ರಾ ಅವರು ನ್ಯಾಯಾಲಯ ಅಥವಾ ಪ್ರಾಸಿಕ್ಯೂಷನ್‌ಗೆ ಹಿಂದಿನ ವಿಚಾರಣೆ ದಿನವಾದ 2024ರ ನವೆಂಬರ್ 8ರವರೆಗೆ ತಿಳಿಸಿರಲಿಲ್ಲ.
ಈ ಮೂಲಕ ನ್ಯಾಯಾಲಯದ ಪ್ರಕ್ರಿಯೆ ವಿಳಂಬಗೊಳ್ಳುವುದಕ್ಕೆ ಚೈತ್ರಾ ಕಾರಣರಾಗಿದ್ದಾರೆ. ಈ ಮೂಲಕ ಅವರು ಜಾಮೀನು ಷರತ್ತು ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರ ಜಾಮೀನು ರದ್ದುಪಡಿಸಬೇಕು ಎಂದು ಕೇಂದ್ರೀಯ ಅಪರಾಧ ದಳ (ಸಿಸಿಬಿ) ಕೋರಿದೆ.
2023ರ ಡಿಸೆಂಬರ್ 5ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚೈತ್ರಾ ಮತ್ತು ಇತರರಿಗೆ ಜಾಮೀನು ಮಂಜೂರು ಮಾಡಿತ್ತು. 2023ರ ನವೆಂಬರ್ 8ರಂದು ಹೈಕೋರ್ಟ್ ಪ್ರಕರಣದ ಮೂರನೇ ಆರೋಪಿ ಹಾಲಶ್ರೀಗೆ ಜಾಮೀನು ನೀಡಿತ್ತು. 2023ರ ನವೆಂಬರ್ 9ರಂದು ಸಿಸಿಬಿಯು ಆರೋಪ ಪಟ್ಟಿ ಸಲ್ಲಿಸಿತ್ತು.
ಚೈತ್ರಾ ಅವರನ್ನು ಪ್ರತಿನಿಧಿಸಿರುವ ವಕೀಲ ಹರ್ಷ ಮುತಾಲಿಕ್ ಅವರು ಆರೋಪ ಮುಕ್ತಿ ಕೋರಿ ನಾವು ಅರ್ಜಿ ಸಲ್ಲಿಸಿದ್ದೆವು. ಇದರ ಬೆನ್ನಿಗೆ ಪ್ರಾಸಿಕ್ಯೂಷನ್ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು. ಇದೆಲ್ಲದರ ನಡುವೆ ನಾವೇ ಚೈತ್ರಾ ಅವರನ್ನು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವತೆ ಸೂಚಿಸಿದ್ದೆವು. ಅದರಂತೆ ಅವರು ನಿನ್ನೆ ಬಿಗ್ ಬಾಸ್ ಶೋನಿಂದ ಬಂದು ನ್ಯಾಯಾಲಯದಲ್ಲಿ ಹಾಜರಾತಿ ಹಾಕಿದ್ದಾರೆ ಎಂದು ತಿಳಿಸಿದರು.
PublicNext
04/12/2024 09:03 am