ಬೆಂಗಳೂರು: ನಾಳೆ ಕಾಂಗ್ರೆಸ್ ಮತ್ತು ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ. ಈ ಮೊದಲು
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಾಡಿದ್ದಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಾಸಕರು ಅಹಿಂದ ಒಕ್ಕೂಟದ ಹೆಸರಿನಲ್ಲಿ ಹಾಸನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ಕೆ.ಎನ್ ರಾಜಣ್ಣ, ಡಾ. ಎಚ್‌ಸಿ ಮಹದೇವಪ್ಪ ಸೇರಿದಂತೆ ಹಲವು ನಾಯಕರು ಸಿದ್ಧತೆಯನ್ನು ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ನಡೆಸಿದ್ದ ಸಿದ್ದರಾಮೋತ್ಸವದ ಮಾದರಿಯಲ್ಲೇ ಮಿನಿ ಸಿದ್ದರಾಮೋತ್ಸವ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ಸ್ವಾಭಿಮಾನ ಸಮಾವೇಶದ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಎಐಸಿಸಿಗೆ ಅನಾಮಧೇಯ ಪತ್ರವೊಂದ ಬರೆದ ಕಾರಣ ಪಕ್ಷದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಕೆಲವರು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷದ ವೇದಿಕೆಯಲ್ಲೇ ಸಮಾವೇಶವನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಬ್ಯಾನರ್ ಅಡಿಯಲ್ಲೇ ನಾಳೆ ಹಾಸನದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ. ಹೈಕಮಾಂಡ್ ನಿರ್ದೇಶನದಂತೆ ಸ್ವಾಭಿಮಾನ ಸಮಾವೇಶಕ್ಕೆ ಜನಕಲ್ಯಾಣ ಸಮಾವೇಶ ಎಂಬ ಹೆಸರಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ.
ಸಿದ್ದರಾಮಯ್ಯ ಪರವಾಗಿ ನಡೆದ ದಾವಣಗೆರೆ ಸಮಾವೇಶದಲ್ಲಿ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ತರಹ ಮಾಡಲು ಹೊರಟಿದ್ದ ಸಿದ್ದರಾಮಯ್ಯ ಬೆಂಬಲಿಗರಿಗೆ ಇದು ಕೊಂಚ ಹಿನ್ನಡೆಯಾಗಿದೆ ಎಂದು ಪಕ್ಷದ ಒಳಗಡೆ ಚರ್ಚೆಯಾಗುತ್ತಿದೆ.
ದೇವೇಗೌಡರ ತವರೂರಾದ ಹಾಸನದಲ್ಲಿ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಟಕ್ಕರ್ ಕೊಡಲು ಈ ಸಮಾವೇಶ ಮಾಡಲಾಗುತ್ತಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ನಾಳೆ ಪ್ರಜ್ವಲ್ ವಿಷಯ ಪ್ರಸ್ತಾಪಿಸಿ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.
PublicNext
04/12/2024 09:59 pm