ಧಾರವಾಡ: ಅಪಾಯಕಾರಿ ಎಚ್‌ಐವಿ ಕುರಿತು ಯುವ ಜನಾಂಗ ಎಚ್ಚರದಿಂದ ಇರಬೇಕು. ಸ್ವೇಚ್ಛಾಚಾರದ ನಡವಳಿಕೆಯಿಂದ ಮಾರಕ ರೋಗ ತಗಲುವ ಅಪಾಯವಿದೆ. ಏಡ್ಸ್‌ನಂತಹ ರೋಗಗಳಿಂದ ದೂರವಿರಲು ಅರಿವು, ಜಾಗೃತಿ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸರ್ಕಾರೇತರ ಸಂಘ- ಸಂಸ್ಥೆಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದ ಜನ ಜಾಗೃತಿ ಜಾಥಾಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಎಚ್‌ಐವಿ ಮತ್ತು ಏಡ್ಸ್ ಕಾಯಿಲೆಯು ಕಳೆದ 35 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಅವರ ನಿರಂತರ ಕಾರ್ಯಕ್ರಮಗಳಿಂದಾಗಿ ಎಚ್ಐವಿ ಸೋಂಕಿತರ ಪ್ರಮಾಣವು ಕಡಿಮೆಯಾಗುತ್ತ ಬಂದಿದೆ.
ಎಚ್ಐವಿ ವೈರಸ್ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದೆ. ಈ ಕಾರಣಗಳಿಂದಾಗಿ ಏಡ್ಸ್ ರೋಗ ನಿಯಂತ್ರಣದ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮೀಣ ಮಟ್ಟದವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
04/12/2024 05:30 pm