ಧಾರವಾಡ: ಸುಮಾರು 30 ಲಕ್ಷ ಶಿಕ್ಷಕರ ಸದಸ್ಯತ್ವ ಹೊಂದಿದ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಅಧ್ಯಕ್ಷ ಹುದ್ದೆ ಮೊದಲ ಬಾರಿಗೆ ಕರ್ನಾಟಕ ರಾಜ್ಯಕ್ಕೆ ದೊರಕಿದೆ.
1954ರಲ್ಲಿ ಸ್ಥಾಪಿತವಾದ ಫೆರಡೇಶನ್ 75 ವರ್ಷಗಳ ಸಂಘಟನೆಯ ಇತಿಹಾಸ ಹೊಂದಿದೆ.
ಬಸವರಾಜ ಗುರಿಕಾರ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತತ 36 ವರ್ಷಗಳ ಅವಧಿಯವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಫೆಡರೇಶನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಗುರಿಕಾರ, ಕೇರಳದ ಕೊಚ್ಚಿಯಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿಯಲ್ಲಿ ಜನಿಸಿದ ಬಸವರಾಜ ಗುರಿಕಾರ ಅಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪ್ರೌಢ ಶಿಕ್ಷಣವನ್ನು ರೋಣದಲ್ಲಿ, ಕಾಲೇಜು ಶಿಕ್ಷಣವನ್ನು ಗದಗ ಹಾಗೂ ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ. 1981ರಲ್ಲಿ ರಾಜ್ಯ ಮಟ್ಟದ ನಿರುದ್ಯೋಗಿ ಶಿಕ್ಷಕರ ಸಂಘ ಸ್ಥಾಪಿಸಿದರು. ಹೋರಾಟದ ಮೂಲಕ ಶಿಕ್ಷಕರ ನೇಮಕಾತಿ ಸಕ್ರಮಗೊಳಿಸಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಬಸವರಾಜ ಗುರಿಕಾರ, ತಾಲೂಕು, ಜಿಲ್ಲಾ ಮಟ್ಟದ ಅಧ್ಯಕ್ಷರಾಗಿ ಕಳೆದ 45 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದಾರೆ.
ರಾಜ್ಯ ಸರ್ಕಾರಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ, ರಾಜ್ಯದ ಹಿರಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಫೆಡರೇಶನ್ ಪ್ರಧಾನ ಕಾರ್ಯದರ್ಶಿಯಾಗಿ ಓಡಿಸ್ಸಾದ ಕಮಲಕಾಂತ ತ್ರಿಪಾತಿ, ಹಿರಿಯ ಉಪಾಧ್ಯಕ್ಷರಾಗಿ ಕೇರಳದ ಹರಿ ಗೋವಿಂದನ್, ಖಜಾಂಚಿಯಾಗಿ ಉಮಾಶಂಕರ್, ಕಾರ್ಯದರ್ಶಿಯಾಗಿ ಕರ್ನಾಟಕದ ಚಂದ್ರಶೇಖರ್ ನುಗ್ಗಲಿ ಒಟ್ಟು ವಿವಿಧ ರಾಜ್ಯಗಳ 30 ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/12/2024 08:30 am