ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಕ್ತದ ಮಡುವಿನಲ್ಲಿ ಬಿದ್ದ ಅಪ್ಪನನ್ನು ಕಂಡು ಬೆಚ್ಚಿ ಬಿದ್ದ ಮಕ್ಕಳು - ಗಿರೀಶನ ಹತ್ಯೆಗೆ ಕಾರಣ ನಿಗೂಢ

ಧಾರವಾಡ: ಈ ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಗಿರೀಶ ಕರಡಿಗುಡ್ಡ ಅಂತಾ. 50 ವರ್ಷ ವಯಸ್ಸಿನ ಗಿರೀಶ, ಧಾರವಾಡ ತಾಲೂಕಿನ ಗರಗ ಗ್ರಾಮದ ನಿವಾಸಿ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಗಿರೀಶ ಇವತ್ತು ಸಂಜೆ ಹೊತ್ತಿಗೆ ತನ್ನದೇ ಮನೆಯಲ್ಲಿ ಬರ್ಬರವಾಗಿ ಕೊಲೆಗೀಡಾಗಿದ್ದಾನೆ.

ಹೌದು! ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿರುವ ಅಪರಿಚಿತರು ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಕೊಚ್ಚಿ ಗಿರೀಶನನ್ನು ಬರ್ಬರವಾಗಿ ಹತ್ಯೆ ಮಾಡಿ, ಮನೆಯ ಹಿಂಬಾಗಿನಿಂದ ಪರಾರಿಯಾಗಿದ್ದಾರೆ. ಸಂಜೆ 5ರ ಬಳಿಕ ಶಾಲೆಯಿಂದ ಮಗಳು ಬಂದು ಕದ ತೆಗೆದಾಗಲೇ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದೆ. ತನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಮಗಳು ಬೆಚ್ಚಿಬಿದ್ದಿದ್ದಾಳೆ.

ಗಿರೀಶ ಗರಗ ಪೊಲೀಸ್ ಠಾಣೆ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿದ್ದರು. ತನ್ನದೇ ಗ್ರಾಮದಲ್ಲಿ ಹೊಸ ಮನೆ ಸಹ ಕಟ್ಟಿಸುತ್ತಿದ್ದರು. ಸಂಜೆ ಹೊಸ ಮನೆ ಕೆಲಸ ನೋಡಿಕೊಂಡು ಸಂಜೆ 4-30ರ ಹೊತ್ತಿಗೆ ತಂದೆ-ತಾಯಿ ವಾಸ ಆಗಿರುವ ಮನೆಯ ಸಮೀಪವೇ ಹಾದು ತನ್ನ ಬಾಡಿಗೆ ಮನೆಗೆ ಬಂದಿದ್ದರು. ಗಿರೀಶ ಜನರಿಗೆ ಕಂಡಿದ್ದು, ಅದೇ ಕೊನೆ. ಗಿರೀಶ ಅವರ ಪತ್ನಿ ಸಹ ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಅವರೂ ಮನೆಗೆ ಬರುವವರೆಗೂ ಈ ವಿಷಯ ತಿಳಿದಿರಲಿಲ್ಲ.

ಗಿರೀಶ ಊರಲ್ಲಿ ಆಗಲಿ, ತನ್ನ ವ್ಯವಹಾರದಲ್ಲಾಗಲಿ ಯಾರೊಂದಿಗೂ ವೈರತ್ವ ಹೊಂದಿರಲಿಲ್ಲ. ಆದರೆ ಇಷ್ಟೊಂದು ಕ್ರೂರವಾಗಿ‌ ಕೊಲೆ ಮಾಡಲು ಕಾರಣ ಏನಿರಬಹುದು ಎನ್ನುವುದೇ ಈಗ ನಿಗೂಢವಾಗಿದೆ. ಹೀಗೆ ಮನೆಯಲ್ಲಿಯೇ ಕೊಲೆಯಾದ ವಿಷಯ ತಿಳಿದು ಇಡೀ ಊರೇ ಶಾಕ್ ಆದಂತೆ ಆಗಿತ್ತು. ಮನೆಯ ಸುತ್ತ ಜನಸಮೂಹವೇ ಸೇರಿತ್ತು. ಮನೆ ಸಮೀಪವೇ ಗರಗ ಠಾಣೆ ಇದ್ದಿದ್ದರಿಂದ ತಡಮಾಡದೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಕೂಡ ಭೇಟಿ ನೀಡಿ ಪರಿಶೀಲಿಸಿದರು. ಊರ ಹೊರಗೆ ಈ ಮನೆ ಇದ್ದು, ಮನೆ ಪಕ್ಕದಲ್ಲೇ ಮಾವಿನ ತೋಟವಿದೆ. ಹಂತಕರು, ಕೊಲೆ ಮಾಡಿದ ಬಳಿಕ ಮನೆಯ ಹಿಂಬದಿಯಿಂದ ಮಾವಿನ ತೋಟದಲ್ಲಿ ಜಿಗಿದು ಪರಾರಿಯಾಗಿರುವ ಸಾಧ್ಯತೆ ಇದೆ. ಶ್ವಾನದಳದವರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಂಜೆಯವರೆಗೂ ಊರಲ್ಲಿಯೇ ಓಡಾಡಿಕೊಂಡಿದ್ದ ಗಿರೀಶ ಹೀಗೆ ಬರ್ಬರವಾಗಿ ಹತ್ಯೆಯಾಗಿದ್ದು ನೋಡಿದರೆ ಇದರ ಹಿಂದೆ ಬಲವಾದ ವೈರತ್ವ ಇರೋದು ಸ್ಪಷ್ಟವಾಗುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮದ ಜಗಳವೋ, ಹಣದ ವ್ಯವಹಾರವೋ ಅಥವಾ ಬೇರೆ ಏನಾದರೂ ಇದೆಯೋ ಎನ್ನುವುದು ಪೊಲೀಸ್ ತನಿಖೆಯಿಂದಷ್ಟೇ ಹೊರ ಬರಬೇಕಿದೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/12/2024 10:18 pm

Cinque Terre

94.52 K

Cinque Terre

0

ಸಂಬಂಧಿತ ಸುದ್ದಿ