ಧಾರವಾಡ: ಪಂಚಮಸಾಲಿ ಸಮದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ, ತಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ನಾವು ಮುತ್ತಿಗೆ ಹಾಕುತ್ತೇವೆ. ಡಿಸೆಂಬರ್ 10 ರಂದು ಸಾವಿರ ಟ್ರ್ಯಾಕ್ಟರ್ ಮೂಲಕ ರ್‍ಯಾಲಿ ಹೋಗಲು ನಿರ್ಧರಿಸಿದ್ದೇವೆ. 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ವಕೀಲರು ಸೇರುತ್ತಾರೆ. ವಕೀಲರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದೆ ಎಂದರು.
ಸುವರ್ಣಸೌಧಕ್ಕೆ ಲಕ್ಷಾಂತರ ಜನ ಪಂಚಮಸಾಲಿ ಸಮುದಾಯದವರು ಮುತ್ತಿಗೆ ಹಾಕಲಿದ್ದಾರೆ. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ನಮ್ಮ ಹೋರಾಟ ಸಮಿತಿ ಪದಾಧಿಕಾರಿಗಳಿಗೆ ಪೊಲೀಸರು ಫೋನ್ ಮಾಡಿ ಎಷ್ಟು ಜನ ಪ್ರತಿಭಟನೆಗೆ ಹೋಗುತ್ತೀರಿ? ಏನು ಮಾಡುತ್ತೀರಿ? ಎಂದು ಕೇಳುತ್ತಿದ್ದಾರೆ. ನಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಮ್ಮ ನೈತಿಕ ಶಕ್ತಿ ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದು ಬೇಸರ ತರಿಸಿದೆ. ಶೆಟ್ಟರ್, ಬಿಎಸ್‌ವೈ, ಬೊಮ್ಮಾಯಿ ಇದ್ದಾಗಲೂ ನಾವು ಹೋರಾಟ ಮಾಡಿದ್ದೇವೆ. ಆಗ ಒಂದೇ ಒಂದು ಕೇಸ್ ಹಾಕಿಲ್ಲ. ನಮ್ಮದು ಅಹಿಂಸಾತ್ಮಕ ಹೋರಾಟ. ಆದರೆ, ಈಗ ಎರಡು ವರ್ಷಗಳಿಂದ ನಮ್ಮ ಹೋರಾಟ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾನು ಎಚ್ಚರಿಕೆ ಕೊಡುತ್ತೇನೆ. ಡಿ.10ರೊಳಗೆ ಪಂಚಮಸಾಲಿ ಸಮಾಜದ ಯಾವುದೇ ಪದಾಧಿಕಾರಿಯನ್ನು ಮುಟ್ಟಿದರೆ ನಾವು ಸುಮ್ಮನಿರೋದಿಲ್ಲ ಎಂದರು.
ದಬ್ಬಾಳಿಕೆ ಮಾಡಿ ಕೇಸ್ ಹಾಕಿದ್ದೇ ಆದಲ್ಲಿ ಬಂಡಾಯ ಆಗುತ್ತದೆ. ಎರಡನೇ ನರಗುಂದ ಬಂಡಾಯ ಆಗುವುದರಲ್ಲಿ ಸಂದೇಹವಿಲ್ಲ. ಹೆಸರಿಗೆ ಪಂಚಮಸಾಲಿ ಹೋರಾಟವಾದರೂ ನಮ್ಮದು ರೈತ ಮಕ್ಕಳ ಹೋರಾಟ. ಬಿಜೆಪಿಯವರಂತೆ ಕಾಂಗ್ರೆಸ್‌ನವರೂ ಮಾತನಾಡಲಿ. ಸರ್ಕಾರ ಮೆಚ್ಚಿಸಲು ಕೆಲ ಜನಪ್ರತಿನಿಧಿಗಳು ಹೋರಾಟಕ್ಕೆ ಹಿನ್ನಡೆ ಮಾಡುತ್ತಿದ್ದಾರೆ. ಸಿಎಂ ಮನಸ್ಸು ಗೆಲ್ಲಲು ಕೆಲ ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಪಕ್ಷಕ್ಕಿಂತ ಸಮಾಜ ದೊಡ್ಡದು. ಅದನ್ನು ಶಾಸಕರು ತಿಳಿದುಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ವಿನಯ್ ಕುಲಕರ್ಣಿ, ರಾಜು ಕಾಗೆ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕೆಲವರು ಬಾಯಿ ಇದ್ದರೂ ಗಟ್ಟಿಯಾಗಿ ಮಾತನಾಡುವುದಿಲ್ಲ. ಡಿಸೆಂಬರ್ 1 ಪಂಚಮಸಾಲಿ ಸಮಾಜದ ರಾಜಕೀಯ ರಹಸ್ಯ ಸಭೆ ಕೂಡ ಮಾಡಲಿದ್ದೇವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/11/2024 02:29 pm