ದೊಡ್ಡಬಳ್ಳಾಪುರ: ಪಾಲಿಸ್ಟಾರ್ ರಾಷ್ಟ್ರಧ್ವಜ ತಯಾರಿಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಅಕ್ಷಮ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ರೈಲು ನಿಲ್ದಾಣ ಸಮೀಪದ ಬೆಸೆಂಟ್ ಪಾರ್ಕ್ ಆವರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾ ದಳ ಆಯೋಜಿಸಿದ್ದ ಐದು ದಿನಗಳ ರಾಜ್ಯಮಟ್ಟದ ಸಮರ್ಥ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಧ್ವಜಸಂಹಿತೆ -2002ಕ್ಕೆ ತಿದ್ದುಪಡಿ ತಂದು ಪಾಲಿಸ್ಟಾರ್ ಬಳಕೆಗೆ ಅನುಮತಿ ನೀಡುವ ಮೂಲಕ ಬಿಜೆಪಿ ಸರ್ಕಾರ ದೇಶ, ಗಾಂಧೀಜಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದೆ. ಖಾದಿ ಬಳಕೆಗೆ ಉತ್ತೇಜನ ನೀಡುತ್ತಿಲ್ಲ, ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಿಂದ ಒಂದೇ ಒಂದು ಧ್ವಜ ಖರೀದಿಸಿಲ್ಲ. ಬಿಜೆಪಿ ನಾಯಕರು ಹೇಳುವುದೇ ಒಂದು ಮಾಡುವುದು ಮತ್ತೊಂದು. ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಘರ್ ಘರ್ ತಿರಂಗ ಯಾತ್ರೆಗೆ ಒಂದು ಲಕ್ಷ ಜನ
ಆಗಸ್ಟ್ 15 ರಂದು ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಘರ್ ಘರ್ ತಿರಂಗ ಯಾತ್ರೆಗೆ ರಾಜ್ಯದಿಂದ ಒಂದು ಲಕ್ಷ ಜನರನ್ನು ಸೇರಿಸುವ ಯೋಜನೆ ಇದೆ. ಎಲ್ಲರಿಗೂ ರಾಷ್ಟ್ರಧ್ವಜ ಒದಗಿಸಲಾಗುವುದು. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯಿಂದಲೇ ರಾಷ್ಟ್ರಧ್ವಜ ಖರೀದಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯಾವುದೇ ರೀತಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಆಗಬಾರದು. ಕೆಳಗೆ ಬಿದ್ದ ಧ್ವಜಗಳನ್ನು ಸಂಗ್ರಹಿಸಲು ಸೇವಾದಳದವರು ತಂಡ ರಚಿಸಿಕೊಳ್ಳಬೇಕು. ಯಾತ್ರೆಯಲ್ಲಿ ರಾಷ್ಟ್ರ ನಾಯಕರು ಭಾಗವಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕು. ಘರ್ ಘರ್ ತಿರಂಗ ಯಾತ್ರೆ ಇತಿಹಾಸದ ಪುಟ ಸೇರುವಂತೆ ನೋಡಿಕೊಳ್ಳಬೇಕು ಎಂದು ಸೇವಾದಳ ಕಾರ್ಯಕರ್ತರಿಗೆ ಸಲಹೆ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನಾವು, ಸ್ವಾತಂತ್ರ್ಯಕ್ಕಾಗಿ ಮಡಿದವರು ನಾವು, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕೊಟ್ಟವರೂ ನಾವೇ. ನಾವೆಲ್ಲ ಕಾಂಗ್ರೆಸ್ಸಿಗರಾಗಿರುವುದೇ ದೊಡ್ಡ ಭಾಗ್ಯ. ಸೇವಾದಳ ಶಿಬಿರದಲ್ಲಿ ಭಾಗವಹಿಸಿದವರು ಜ್ಞಾನ ಸಂಪಾದನೆ ಮೂಲಕ ಹಿಂತಿರುಗಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Kshetra Samachara
17/07/2022 10:13 am