ಬೆಂಗಳೂರು: ಮುಡಾ, ವಾಲ್ಮೀಕಿ ಹಗರಣಗಳ ನಂತರ ಮತ್ತೊಂದು ಯೋಜನೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿದೆ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವತಿಯಿಂದ 2022 ರಿಂದ 2023ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಕರೆಯಲ್ಪಟ್ಟ ಬೆಳಗಾವಿ ವಿಭಾಗದಲ್ಲಿ ಬಡವರಿಗಾಗಿ ಮೀಸಲಿಟ್ಟಿರುವ ವಸತಿ ಗೃಹಗಳ ನಿರ್ಮಾಣ ಟೆಂಡರ್ ಕಾಮಗಾರಿಗಳಿಗಾಗಿ ಹೊರ ರಾಜ್ಯದ ಏಜೆನ್ಸಿ ಹಾಗೂ ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಸ್ಥಳೀಯ ಕಂಪನಿ ಟೆಂಡರ್ ಪಡೆದು ಕೋಟ್ಯಾಂತರ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.
ಪ್ರಭಾವಿ ರಾಜಕಾರಣಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಕಮೀಷನ್ ದುರಾಸೆಯಿಂದ ಸರ್ಕಾರ ಮತ್ತು ಸಾರ್ವಜನಿಕರ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಲಾಗುತ್ತಿದ್ದಾರೆ ಎಂದು ಆರೋಪಿಸಿರುವ ಹೊಸಪೇಟೆ ಮೂಲದ ಆರ್ಟಿಐ ಕಾರ್ಯಕರ್ತ ಶ್ರೀನಾಥ್ ಪಿ.ಎಸ್., ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಡವರಿಗಾಗಿ ಮೀಸಲಿಟ್ಟಿರುವ ಜಿ+3 ವಸತಿ ಗೃಹಗಳ ನಿರ್ಮಾಣದ ಟೆಂಡರನ್ನ ನ್ಯಾಷನಲ್ ಪ್ರಾಜೆಕ್ಸ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್, ಚೇತಕ್ ವೆಂಚರ್ಸ್ ಪ್ರೈವೈಟ್ ಲಿಮಿಟೆಡ್ ಹಾಗೂ ಫೈವ್ ಸೀಸ್ ಬಿಲ್ಡರ್ಸ್ ನಿರ್ಮಾಣ ಮಾಡುತ್ತಿವೆ.ಅಂದಾಜು ಸುಮಾರು 100.00 ಕೋಟಿ ಟೆಂಡರ್ ಕಾಮಗಾರಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಹೆಚ್ಚುವರಿ ಮೊತ್ತ ಅಂದಾಜು ಸುಮಾರು ರೂ. 98.60 ಕೋಟಿ ಗಳಿಗೆ ಟೆಂಡರ್ ಪಡೆದು ಇದೇ ಕಾಮಗಾರಿಯನ್ನು ಪುನಃ ಒಂದೇ ಸೈಟ್‌ಗೆ ಎರಡೆರಡು ಪ್ರತ್ಯೇಕ ಕಾಮಗಾರಿ ಎಂದು ತೋರಿಸಲಾಗಿದೆ. ಆ ಮೂಲಕ ಒಟ್ಟಾರೆ ಪ್ರತ್ಯೇಕವಾಗಿ ಅಂದಾಜು ರೂ. 79.00 ಕೋಟಿ ಹಾಗೂ ಅಂದಾಜು ರೂ. 14.00 ಕೋಟಿಯಂತೆ ಸಬ್ ಟೆಂಡರ್ ಕರೆದು ನಕಲಿ ದಾಖಲೆಗಳನ್ನ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಚೇತಕ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಫೈವ್ ಸೀಸ್ ಬಿಲ್ಡರ್ಸ್ ಈಗಾಗಲೇ ಅನರ್ಹವಾಗಿರುವ ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಗುತ್ತಿಗೆದಾರ ಕಂಪನಿಗಳಾಗಿವೆ. ಆ ಕಂಪನಿಗಳು ಸಬ್ ಟೆಂಡರ್ ಪಡೆದು ಸರ್ಕಾರದ ಹಾಗೂ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣ ಲೂಟಿ ಮಾಡುತ್ತಿವೆ. ಅಕ್ರಮದ ಕುರಿತು ಸಮಗ್ರ ತನಿಖೆಯಾಗಬೇಕು ಹಾಗೂ ಅಂಥ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಹಾಲಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಹಿಂದೆ ವಸತಿ ಸಚಿವರಾಗಿದ್ದ ಸೋಮಣ್ಣ ಮೇಲೂ ಆರೋಪಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
PublicNext
13/12/2024 08:44 am