ಬೆಂಗಳೂರು: ನವಮಾಸ ನರಳಿ ಮಗುವಿಗೆ ಜನ್ಮ ನೀಡೋ ತಾಯಿ ತನಗೆ ಏನೇ ಆದ್ರೂ ತನ್ನ ಮಕ್ಕಳಿಗೆ ಏನೂ ಆಗಬಾರ್ದು ಅಂತ ಕನವರಿಸ್ತಾಳೆ. ಆದ್ರೆ ಇಲ್ಲೊಬ್ಬಳು ಮಹಾನ್ ತಾಯಿ ಗಂಡ - ಹೆಂಡತಿ ಜಗಳಕ್ಕೆ ಹೆತ್ತ ಮಕ್ಕಳ ಉಸಿರಗಟ್ಟಿಸಿ ನಂತರ ತಾನೂ ಉಸಿರು ಚೆಲ್ಲಿದ್ದಾಳೆ.
ಮಕ್ಕಳಿಗೆ ಏನೇ ನೋವಾದ್ರೂ ಮೊದಲು ನೆನಪಾಗೋದು ಅಮ್ಮ. ಬಿದ್ದಾಗ, ಎದ್ದಾಗ, ಒದೆ ತಿಂದಾಗ ಬಾಯಿಂದ ಬರೋ ಪದವೇ ಅಮ್ಮ.. ಆ ಅಮ್ಮನೇ ಮಕ್ಕಳಿಗೆ ನೋವು ನೀಡಿ ಎಳೆ ಮಕ್ಕಳನ್ನ ಕೊಂದು ತಾನು ನೇಣಿಗೆ ಶರಣಾಗಿದ್ದಾಳೆ. ಈ ಫೋಟೋದಲ್ಲಿರೋ ಸುರೇಶ್ ಮತ್ತು ಕುಸುಮಾ. ಜೊತೆಗಿರೋ ಮುದ್ದಾದ ಮಕ್ಕಳ ಹೆಸರು ಶ್ರೇಯನ್ ಮತ್ತು ಚಾರ್ವಿ.
ಟೆಕ್ಕಿಯಾಗಿದ್ದ ಸುರೇಶ್ ವೈಟ್ ಫೀಲ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಸುರೇಶ್ ಮತ್ತು ಕುಸುಮಾ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡ್ತಿದ್ರು. ಗಂಡ ಹೆಂಡತಿ ಉಂಡು ಮಲಗೋವರೆಗೂ ಇದ್ದಿದ್ರೆ ಈ ಘೋರ ನಡಿತಿರ್ಲಿಲ್ವೇನೋ. ಆದ್ರೆ ಕುಸುಮಾ ಗಂಡನ ಜೊತೆಗಿನ ಕಲಹದಿಂದಾಗಿ ಬೇಸತ್ತು ಹೋಗಿದ್ಳು. ಇದೇ ಕಾರಣಕ್ಕೆ ನಿನ್ನೆ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದ ಹಾಗೆ ಈ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ. ಆರು ವರ್ಷದ ಮಗ ಶ್ರೇಯಾನ್ ಹಾಗೂ ಒಂದುವರೆ ವರ್ಷದ ಮಗಳು ಚಾರ್ವಿಯ ಕೊಲೆ ಮಾಡಿದ ಬಳಿಕ ತಾಯಿ ಕುಸುಮಾ (35) ನೇಣಿಗೆ ಶರಣಾಗಿದ್ದಾಳೆ.
2015ರಲ್ಲಿ ವಿವಾಹವಾಗಿದ್ದ ಸುರೇಶ್ ಹಾಗೂ ಕುಸುಮಾ ದಂಪತಿ ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಸುರೇಶ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ತಡರಾತ್ರಿ ಮನೆಯಲ್ಲಿದ್ದ ಕುಸುಮಾ 'ನಮ್ಮ ಸಾವಿಗೆ ನಾವೇ ಕಾರಣ' ಎಂದು ಡೆತ್ ನೋಟ್ ಬರೆದಿಟ್ಟು, ಮಕ್ಕಳನ್ನ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಹ ಸಿಕ್ಕಿದ್ದು, ಡೆತ್ ನೋಟ್‌ನಲ್ಲಿ Congrats your ego wins ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾಳಂತೆ. ಸದ್ಯ ಡೆತ್ ನೋಟ್‌ನ
ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೂ ನಿನ್ನೆ ತಾಯಿ ಸತ್ತ ದಿನ ಕೂಡ ಆಗಿದ್ದು ಅದೇ ದಿನ ಗಾಯದ ಮೇಲೆ ಬರೆ ಎಳೆದಂತೆ ಹೆಂಡತಿ ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಅದೇನೆ ಜಗಳ ಮನಸ್ತಾಪ ಇದ್ರೂ ಮುದ್ದು ಮಕ್ಕಳನ್ನ ಉಸಿರು ನಿಲ್ಲಿಸಲು ಆ ತಾಯಿಗೆ ಆದೇನು ಧೈರ್ಯ ಬಂದಿತ್ತೋ ಗೊತ್ತಿಲ್ಲ..
PublicNext
12/12/2024 03:43 pm