ಬೆಂಗಳೂರು: ಕೇರಳ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ 100 ಮನೆಗಳನ್ನ ನಿರ್ಮಾಣ ಮಾಡಿಕೊಡ್ತೀವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವುದಕ್ಕೆ ಇದು ಗುಲಾಮಗಿರಿಯ ಸಂಕೇತ ಎಂದು ಸಿಟಿ ರವಿ ಕಿಡಿ ಕಾರಿದ್ದಾರೆ.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಕೇರಳದ ವಯನಾಡಿನ ಸಂತ್ರಸ್ತರ ಬಗ್ಗೆ ಕಾಳಜಿ ಇರುವುದು ತಪ್ಪೆಂದು ಹೇಳುವುದಿಲ್ಲ, ಅಲ್ಲಿ ಅಗತ್ಯವಾದರೆ ಜಾಗ ಖರೀದಿಸಿ ಮನೆ ಕಟ್ಟಿಕೊಡುವ ಕುರಿತು ಸಿಎಂ ಪತ್ರ ಬರೆದಿದ್ದಾರೆ. ಇದು ಮಾನವೀಯ ಕಳಕಳಿ ಇರುವವರು ವರ್ತಿಸಬೇಕಾದ ಸಂಗತಿ. ಇದು ತಪ್ಪೆನ್ನಲಾರೆ. ನೀವು ಕೇವಲ ವಯನಾಡಿಗೆ ಮಾತ್ರ ನಿಮ್ಮ ದೃಷ್ಟಿ ಹರಿಸಿದ್ದು, ನಿಮ್ಮ ಮಾನಸಿಕ ಗುಲಾಮಗಿರಿಯ ಸಂಕೇತದಂತಿದೆ ಎಂದು ಆಕ್ಷೇಪಿಸಿದರು.
ವಯನಾಡನ್ನು ಹಿಂದೆ ರಾಹುಲ್ ಗಾಂಧಿ, ಈಗ ಪ್ರಿಯಾಂಕ ಗಾಂಧಿ ಪ್ರತಿನಿಧಿಸುತ್ತಿದ್ದು, ಇದು ನಿಮ್ಮ ಸಹಜ ಮಾನವೀಯ ಕಳಕಳಿ ಎಂದು ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕದ ಎತ್ತಿನಹೊಳೆ ಸಂಬಂಧ ಬೇಲೂರಿನ ವಡ್ಡರಹಳ್ಳಿಯ ರೈತ ರಂಗಸ್ವಾಮಿ ಅವರು ಎತ್ತಿನಹೊಳೆಯ ಪರಿಹಾರ ಬಂದಿಲ್ಲ ಎಂದು ಅಲೆದಲೆದು ಸಾಕಾಗಿ, ಲಂಚ ಕೇಳಿದ ಅಧಿಕಾರಿಯ ನಡೆಯಿಂದ ಬೇಸತ್ತು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸಮಾವೇಶ ಮಾಡಿದ ನೀವು ಎತ್ತಿನಹೊಳೆ ದುರ್ಘಟನೆ, ಸರಣಿ ರೀತಿಯಲ್ಲಿ ಬಾಣಂತಿಯರ- ಹಸುಗೂಸುಗಳ ಸಾವು ಬಗ್ಗೆ ತೋರಿಸದ ಮಾನವೀಯ ಕಳಕಳಿ ವಯನಾಡಿಗೆ ಸೀಮಿತವಾದ ಮರ್ಮವೇನು ಎಂದು ಪ್ರಶ್ನಿಸಿದರು.
PublicNext
11/12/2024 10:14 pm