ಆನೇಕಲ್: ಸರ್ಜಾಪುರ ಆಶ್ರಯ ಯೋಜನೆಗೆ ಮಂಜೂರಾಗಿರುವ ಜಮೀನಿನಲ್ಲಿ ನಿರ್ಮಾಣ ಮಾಡುತ್ತಿರುವ ಮನೆಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡದಿರುವಂತೆ ಒತ್ತಾಯಿಸಿ ಇಂದು ಅಧ್ಯಕ್ಷರು ಹಾಗೂ ಗ್ರಾಮಸ್ಥರು ಸರ್ಜಾಪುರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಇನ್ನು, ಪಂಚಾಯಿತಿ ಅಧ್ಯಕ್ಷರು ಹಾಗೂ 20 ಚುನಾಯಿತ ಪ್ರತಿನಿಧಿಗಳು ಕಟ್ಟಿಕೊಳ್ಳುತ್ತಿರುವ ಅರ್ಹ ಫಲಾನುಭವಿಗಳಿಗೆ ಮನೆ ನೀಡುವಂತೆ ಪಿಡಿಒ ಮುಖೇನ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಮನವಿ ಪತ್ರ ಸಲ್ಲಿಸಿದ್ದಾರೆ.
ಇಲ್ಲಿನ ಸರ್ಜಾಪುರ ಗ್ರಾಮದ ಸರ್ವೆ ನಂ. 438ರಲ್ಲಿ ಸರ್ಕಾರದ ಆದೇಶದಂತೆ 3 ಎಕರೆ 21 ಗುಂಟೆ ಜಾಗದಲ್ಲಿ 30 ವರ್ಷಗಳ ಹಿಂದೆ 58 ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಇನ್ನು 13 ಗುಂಟೆ ಜಾಗ ಖಾಲಿ ಬಿದ್ದಿತ್ತು, ಆ ಜಾಗದಲ್ಲಿ ಬಡವರು ಮನೆಗಳನ್ನು ಕಟ್ಟುತ್ತಿರುವಾಗ ಅಧಿಕಾರಿಗಳು ತಡೆದು, ತೊಂದರೆ ನೀಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ.
ಪಕ್ಕದಲ್ಲೇ ಖಾಸಗಿ ಜಮೀನು ಮಾಲೀಕರಾದ ಸೋಫಾನಿಕ ಅಪಾರ್ಟ್ಮೆಂಟ್, ಸರ್ಕಾರಿ ಅಧಿಕಾರಿಗಳಿಗೆ ಹಣ ಕೊಟ್ಟು ಜಾಗವನ್ನು ಬಿಡಿಸಿ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ಜಾಗಕ್ಕೆ ಮಧ್ಯಾಹ್ನ ಬೆಂಗಳೂರು ನಗರ ಎಂಎಲ್ಸಿ ಗೋಪಿನಾಥ ರೆಡ್ಡಿ ಸಹ ಸೋಫಾನಿಕ ಬಡಾವಣೆ ಪರವಾಗಿ ಜಾಗದ ಪರಿಶೀಲನೆಗೆ ಅಂತ ಬಂದಿದ್ದರು. ಆ ವೇಳೆ ಅವರಿದ್ದ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ಅರಿತ ಎಂಎಲ್ಸಿ ಗೋಪಿನಾಥ್ ರೆಡ್ಡಿ ಅಲ್ಲಿಂದ ವಾಪಸ್ ಆದ್ರು. ಇನ್ನು ಸರ್ಜಾಪುರದ ಸರ್ವೆ ನಂ. 438 ಜಾಗದಲ್ಲಿ ದಿನೇ ದಿನೆ ಜಾಗದ ವಿಚಾರಕ್ಕೆ ಬಿಜೆಪಿ- ಕಾಂಗ್ರೆಸ್ ನಡುವಿನ ಗುದ್ದಾಟದಿಂದ ಬಡವರಿಗೆ ಅನ್ಯಾಯವಾಗುತ್ತಿರುವುದು ವಿಪರ್ಯಾಸ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಅನ್ನೋದನ್ನು ಕಾದು ನೋಡಬೇಕಿದೆ.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
Kshetra Samachara
05/07/2022 08:35 pm