ಬೆಂಗಳೂರು: ಅದು ದಶಕಗಳಿಂದ ನಡೆಯುತ್ತಿರುವ ಬೃಹತ್ ಕಾಮಗಾರಿ.ಬರೋಬ್ಬರಿ 6 ಸಿಎಂಗಳ ಸೂಚನೆ ಮೇರೆಗೆ ನಡೆಯು ತ್ತಿರುವ ಕಾಮಗಾರಿ. 11 ವರ್ಷದ ಬಳಿಕವೂ ಕುಂಠುತ್ತಾ ಸಾಗುತ್ತಿರುವ ಕಾಮಗಾರಿಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಹೌದು....11 ವರ್ಷಗಳು ಪೂರ್ಣಗೊಂಡರೂ ಮೆಜೆಸ್ಟಿಕ್ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ಓಕಳಿಪುರ ಸಿಗ್ನಲ್ ಫ್ರೀ ಕಾರಿಡಾರ್ ಮಾತ್ರ ಪೂರ್ಣಗೊಂಡಿಲ್ಲ. ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಮಹತ್ವದ ಯೋಜನೆಯೊಂದು ಆಮೆಗತಿಯಲ್ಲಿ ಸಾಗುವಂತಾಗಿದೆ.
ಬೆಂಗಳೂರಿನ ಪಶ್ಚಿಮ ಹಾಗೂ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಸಿಗ್ನಲ್ ಮುಕ್ತಗೊಳಿಸಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ 2011ರಲ್ಲಿ ಓಕಳಿಪುರ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ರೂಪಿಸಲಾಯಿತು. ಅದಾದ ಮೂರು ವರ್ಷಗಳ ನಂತರ ಅಂದರೆ 2015 ಜೂನ್‌ನಲ್ಲಿ ಪ್ರಾರಂಭಿಕ ಹಂತದ ಕಾಮಗಾರಿ ಆರಂಭಿಸಲಾಯಿತಾದರೂ ಈವರೆಗೆ ಪೂರ್ಣಗೊಂಡಿಲ್ಲ. ರೈಲ್ವೆ ಹಾಗೂ ಬಿಬಿಎಂಪಿ ನಡುವೆ ಇನ್ನೂ ಸಮನ್ವಯತೆ ಸಾಧಿಸಲು ಸಾಧ್ಯವಾಗದ ಕಾರಣ ಯೋಜನೆ ಪೂರ್ಣಗೊಳ್ಳಲು ಇನ್ನೂ 6 ರಿಂದ 8 ತಿಂಗಳು ಬೇಕಾಗಲಿದೆ.
ಆರಂಭದಲ್ಲಿ ಬಿಬಿಎಂಪಿ 115.50 ಕೋಟಿ ರೂ. ಯೋಜನಾ ವೆಚ್ಚ ನಿಗದಿ ಮಾಡಿತ್ತು. ಆದರೆ, ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ 102.83 ಕೋಟಿ ರೂ.ಗೆ ಬಿಡ್ ಸಲ್ಲಿಸಿ ಯೋಜನೆ ಅನುಷ್ಠಾನದ ಗುತ್ತಿಗೆ ಪಡೆದುಕೊಂಡಿತು. ಅದಕ್ಕೆ ಸಂಬಂಧಿಸಿದಂತೆ 2012ರ ಡಿಸೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಯಿತು. ಈ ವೇಳೆ 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಗಡುವು ವಿಧಿಸಲಾಯಿತು. ಆದರೆ ಕಾರ್ಯಾದೇಶ ನೀಡಿ 10 ವರ್ಷಗಳಾಗುತ್ತಿದ್ದರೂ ಇನ್ನೂ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
ಬಿಬಿಎಂಪಿಯಿಂದ 8 ಪಥದ ರಸ್ತೆ ಎರಡು ಕೆಳಸೇತುವೆ, ಎರಡು ಮೇಲ್ಸೇತುವೆ ನಿರ್ಮಿಸಬೇಕಿತ್ತು. ಅದರಲ್ಲಿ ಈಗಾಗಲೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದಂತೆ ರಾಜಾಜಿನಗರ ಹಾಗೂ ಮಲ್ಲೇಶ್ವರ ಕಡೆಯಿಂದ ಬರುವ ವಾಹನಗಳು ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಉಳಿದಿದೆ. ಇದೀಗ ಆ ಕಾಮಗಾರಿಯನ್ನು ಆರಂಭಿಸಲಾಗಿದ್ದು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.
2011ರಲ್ಲಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಅದಾದ ನಂತರ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಸಿಎಂ ಆದರು. ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ಬಿಬಿಎಂಪಿಯ ಎರಡು ಅವಧಿಗಳು ಪೂರ್ಣಗೊಂಡಿವೆ. ಇಷ್ಟಾದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ.
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
01/06/2022 10:34 pm