ಬೆಂಗಳೂರು: ಇಂದು ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ರೌಂಡ್ಸ್ ನಲ್ಲಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರು ಹಲವು ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.
ಅಬ್ಬಿಗೆರೆ ಮುಖ್ಯ ರಸ್ತೆ(ಅರಣ್ಯ ರಸ್ತೆ)ಯಿಂದ ವೈ ನಾಗ್ ಜಂಕ್ಷನ್ ಮೂಲಕ ಗಂಗಮ್ಮ ಗುಡಿ ಪೊಲೀಸ್ ಠಾಣೆಯವರೆಗೆ 9.5 ಕೋಟಿ ರೂ. ವೆಚ್ಚದಲ್ಲಿ 1.35 ಕಿ.ಮೀ ಉದ್ದದ 30 ಅಡಿ ರಸ್ತೆಯನ್ನು 80 ಅಡಿಗೆ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಬದಿ ಕಾಲುವೆ, ಪಾದಚಾರಿ ಮಾರ್ಗ ಸೇರಿದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇಡರಹಳ್ಳಿ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಕೆಲಸ ಪೂರ್ಣಗೊಂಡಿದ್ದು, ರಸ್ತೆ ಪುನಶ್ಚೇತನ ಕಾರ್ಯವನ್ನು ಇನ್ನೂ ಪೂರ್ಣಗೊಳಿಸದೇ ಇರುವುದನ್ನು ಗಮನಿಸಿ ಕೂಡಲೆ ರಸ್ತೆ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.
ಕಿರ್ಲೋಸ್ಕರ್ ಬಡಾವಣೆಯಲ್ಲಿ 110 ಹಳ್ಳಿ ರಸ್ತೆ ಪುನಶ್ಚೇತನ ಕಾರ್ಯ ಪರಿಶೀಲನೆ ನಡೆಸಿ, ಸರಿಯಾದ ಜಲ್ಲಿಯನ್ನು ಹಾಕಿ ಡಾಂಬರೀಕರಣ ಮಾಡಬೇಕು. ಜೊತೆಗೆ ರಸ್ತೆ ಬದಿ ಚರಂಡಿಗಳನ್ನು ಸರಿಯಾಗಿ ನಿರ್ಮಿಸಬೇಕು. ರಸ್ತೆ ಪುನಶ್ಚೇತನ ಕಾರ್ಯ ಮುಗಿದ ನಂತರ ಮತ್ತೆ ರಸ್ತೆ ಅಗೆಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
2.5 ಕಿ.ಮೀ ಉದ್ದದ ನೆಲಗದನಹಳ್ಳಿ ಮುಖ್ಯ ರಸ್ತೆಯನ್ನು 20 ಕೋಟಿ ರೂ. ವೆಚ್ಚದಲ್ಲಿ 30 ಅಡಿ ಯಿಂದ 60 ಅಡಿಗೆ ಅಗಲೀಕರಣ ಕೆಲಸ ಪ್ರಾರಂಭವಾಗಿದೆ. ಇದರಿಂದ ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಭಿವೃದ್ಧಿ ಹಕ್ಕು ಹಸ್ತಾಂತರ(ಟಿಡಿಆರ್) ಪ್ರಕ್ರಿಯೆಯನ್ನು ಮುಗಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೊಕ್ಕಚಂದ್ರ ಕೆರೆಯು 27 ಎಕರೆ ಪ್ರದೇಶದಲ್ಲಿದ್ದು, ಶುದ್ಧ ನೀರು ಕೆರೆಗೆ ಸೇರುವ ಸಲುವಾಗಿ 1 ಎಂ.ಎಲ್.ಡಿ ಎಸ್.ಟಿ.ಪಿ ಅಳವಡಿಸಲಾಗಿದೆ. ಕೆರೆಯ ಬಳಿಯಿರುವ ರಾಜಕಾಲುವೆಯಲ್ಲಿ ವಾರ್ಷಿಕ ನಿರ್ವಹಣೆ ಗುತ್ತಿಗೆಯಡಿ ನಿರಂತರವಾಗಿ ಹೂಳೆತ್ತುವ ಕಾರ್ಯ ಮಾಡಬೇಕು. ಇದೇ ಸ್ಥಳದಲ್ಲಿ ಮಳೆಯಾದರೆ ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅದನ್ನು ತಪ್ಪಿಸುವ ಸಲುವಾಗಿ ಪರ್ಯಾಯ ಕಾಲುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ಮೇಲೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ 100 ಮೀಟರ್ ಖಾಸಗಿ ಸ್ಥಳದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ರಸ್ತೆಗೆ ಅನುವು ಮಾಡಿಕೊಟ್ಟಿರುವ ಮಾಲೀಕರಿಗೆ ಟಿಡಿಆರ್ ನೀಡಿ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Kshetra Samachara
13/05/2022 09:39 pm