ಬೆಂಗಳೂರು: ರಸ್ತೆ ಅಭಿವೃದ್ಧಿಗೆ ಸರಕಾರ ಪ್ರತಿವರ್ಷ ಕೋಟ್ಯಂತರ ರೂ. ವ್ಯಯಿಸುತ್ತದೆ. ಹೀಗಿದ್ದರೂ ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆಯಿಂದ ಅದೆಷ್ಟೋ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿದಿದೆ!
ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ಬಿಟಿಎಂ-ಬೊಮ್ಮನಹಳ್ಳಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲ್ಸೇತುವೆ ಕಾಮಗಾರಿ, ಮರುಡಾಂಬರೀಕರಣ ಕಾಮಗಾರಿ. 2012ರಲ್ಲಿ ರೂಪಿಸಿದ್ದ ಯೋಜನೆಯನ್ನು ಆರು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಆದ್ರೆ, ಕೇವಲ 200 ಮೀಟರ್ ಉದ್ದದ ಕಾರಿಡಾರ್ ಯೋಜನೆ ಇಂದಿಗೂ ನನೆಗುದಿಗೆ ಬಿದ್ದಿದೆ.
ಬಿಬಿಎಂಪಿ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಬಿಟಿಎಂ ಲೇಔಟ್-ಬೊಮ್ಮನಹಳ್ಳಿ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿತ್ತು. ಲಾಕ್‌ಡೌನ್ ಸಮಯ ನಗರದ ರಸ್ತೆಗಳಲ್ಲಿ ಕಡಿಮೆ ವಾಹನಗಳು ಸಂಚರಿಸುವುದರಿಂದ, ಪಾಲಿಕೆ ಈ ರಸ್ತೆ ಕೆಲಸ ಪೂರ್ಣಗೊಳಿಸಲು ಎಲ್ಲ ಸಮಯವನ್ನು ಹೊಂದಿತ್ತು.
ಆದರೆ, ಅದ್ಯಾಕೋ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಲೇ ಇಲ್ಲ. ಜನಪ್ರತಿನಿಧಿಗಳು ಕೂಡ ಈ ಅಪೂರ್ಣ ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿದಿದ್ದರೂ ತಲೆಕೆಡಿಸಿಕೊಳ್ಳುತ್ತಲೇ ಇಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ನವೀನ್, 'ಪಬ್ಲಿಕ್ ನೆಕ್ಸ್ಟ್'ಬೆಂಗಳೂರು
PublicNext
24/03/2022 08:12 am