ವಿಜಯಪುರ: 20 ಸಾವಿರ ಬೆಟ್ಟಿಂಗ್ ಕಟ್ಟಿ ಹುಚ್ಚು ಸಾಹಸಕ್ಕೆ ಕೈಹಾಕಿದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ವಿಜಯಪುರ ಜಿಲ್ಲೆ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ.
ದ್ಯಾಬೇರಿ ಗ್ರಾಮದ ಪ್ರಕಾಶ್ ಮೋರೆ (45) ಸಾವನಪ್ಪಿದ ವ್ಯಕ್ತಿ. ನಿನ್ನೆ ( ಸೋಮವಾರ) ಮಧ್ಯಾಹ್ನ ಪ್ರಕಾಶ್ ಸ್ನೇಹಿತರ ಜೊತೆಗೆ ಎಣ್ಣೆ ಪಾರ್ಟಿ ಮಾಡಿ ಬಳಿಕ ಮದ್ಯದ ನಶೆಯಲ್ಲಿ ದ್ಯಾಬೇರಿ ಗ್ರಾಮದ ಬಳಿಯಿರುವ ಕೆರೆಗೆ ಬಂದಿದ್ದ. ಈ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆರೆಯಲ್ಲಿ ಈಜಿ ದಡ ಸೇರಿದರೆ 20 ಸಾವಿರ ರೂ. ನೀಡುವುದಾಗಿ ಸ್ನೇಹಿತರು ಬೆಟ್ಟಿಂಗ್ ಕಟ್ಟಿದ್ದಾರೆ. 20 ಸಾವಿರ ರೂ. ಬೆಟ್ಟಿಂಗ್ ಆಸೆಗಾಗಿ ನೀರಿಗೆ ಜಿಗಿದ ಪ್ರಕಾಶ್ ಕುಡಿದ ಮತ್ತಿನಲ್ಲಿ ಹಾಗೂ ಸರಿಯಾಗಿ ದಡ ಗುರುತಿಸಲಾಗದೆ ಕೈ ಸೋತು ನೀರು ಪಾಲಾಗಿದ್ದಾನೆ. ಪ್ರಕಾಶ ನೀರು ಪಾಲಾಗುತ್ತಿದ್ದಂತೆ ಸ್ಥಳದಿಂದ ಸ್ನೇಹಿತರು ಪರಾರಿಯಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಕೆರೆಯಿಂದ ಪ್ರಕಾಶ್ ಶವ ಹೊರತೆಗೆದಿದ್ದಾರೆ. ಪ್ರಕಾಶ್‌ನನ್ನು ಕೊಲೆ ಮಾಡಿ ಕೆರೆಗೆ ಬೀಸಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Kshetra Samachara
10/05/2022 12:50 pm