ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚು ಬಾಧಿಸುತ್ತಿದೆ. ಅದರಲ್ಲೂ ಮಹಾನಗರಗಳಲ್ಲೇ ಹೆಚ್ಚು ಹರಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಬೇಡಿಕೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಬಿಬಿಎಂಪಿ ತಯಾರಿ ನಡೆಸಿದ್ದು, ಸರಣಿ ಸಭೆ ನಡೆಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆ (CHBMS)ಗೆ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳವು ಜನರಲ್ಲಿ ಭೀತಿಯನ್ನುಂಟು ಮಾಡಬಹುದು. ಆದರೆ ಯಾರೊಬ್ಬರೂ ಭಯಪಡುವ ಅವಶ್ಯಕತೆಯಿಲ್ಲ. ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಂಡಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಪ್ರತಿನಿತ್ಯ ಸುಮಾರು 60,000 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣ ಪ್ರತಿನಿತ್ಯ 20ರಿಂದ 60ಕ್ಕೆ ಏರಿಕೆಯಾಗಿದ್ದು, ಸೋಂಕಿತ ವ್ಯಕ್ತಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಪಾಲಿಕೆಯ ಟೆಲಿ ಟ್ರಯಾಜಿಂಗ್ ತಂಡ ಹಾಗೂ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟ್ರಯಾಜಿಂಗ್ ತಂಡವು ಸೋಂಕಿತ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಅವಲೋಕಿಸಲಿದ್ದು, ಆಸ್ಪತ್ರೆಯ ಅವಶ್ಯಕತೆ ಇರುವವರಿಗೆ ಮಾತ್ರ ದಾಖಲಿಸಿ, ಉಳಿದವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವ ಮೂಲಕ ಚಿಕಿತ್ಸೆ ಪಡೆಯಲು ತಿಳಿಸಬೇಕು.
ಹೆಚ್ಚಿನ ಕೋವಿಡ್ ಪ್ರಕರಣಗಳಲ್ಲಿ ಎಸಿಮ್ಟಮೇಟಿಕ್ ಆಗರಲಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿರುತ್ತದೆ. ಈ ಬಗ್ಗೆ ನಾಗರೀಕರಲ್ಲಿ ಮನವರಿಕೆ ಮಾಡಬೇಕು. ಆಸ್ಪತ್ರೆಗೆ ದಾಖಲಿಸುವಂತಹ ಪ್ರಕರಣಗಳನ್ನಷ್ಟೇ ಆಸ್ಪತ್ರೆಗೆ ರವಾನಿಸಬೇಕು. ಇದಕ್ಕಾಗಿ ಟ್ರಯಾಜಿಂಗ್ ಸರಿಯಾಗಿ ನಡೆಯಬೇಕಿದ್ದು, ಟ್ರಯಾಜಿಂಗ್ ಮಾಡಲು ಬೇಕಾದ ಹೆಚ್ಚುವರಿ ಸಿಬ್ಬಂದಿಯನ್ನು ವಲಯವಾರು ನಿಯೋಜನೆ ಮಾಡಿಕೊಳ್ಳಬೇಕು. ಜೊತೆಗೆ ವಲಯ ಸಂಯೋಜಕರು ಇದರ ಬಗ್ಗೆ ನಿಗಾ ಇಡಬೇಕು ಎಂದು ಅಧಿಕಾರಿಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಯನ್ನು ಮೀಸಲಿಡಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸಾಕಷ್ಟು ಹಾಸಿಗೆಗಳ ಲಭ್ಯತೆ ಇದೆ. ಯಾರೊಬ್ಬರೂ ಗಾಬರಿಪಡುವ ಅಗತ್ಯವಿಲ್ಲ. ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ ರೂಂಗಳು ಕೂಡಲೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
Kshetra Samachara
06/01/2022 08:02 pm