ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹ ಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ! - HDK
Description : ಬಳ್ಳಾರಿಯಲ್ಲಿ ಸರಣಿ ಸಾವಿನ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಆರೋಗ್ಯ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಕುಮಾರಸ್ವಾಮಿ , ಪ್ರಗತಿಪರ ರಾಜ್ಯ ಕರ್ನಾಟಕದಲ್ಲಿ ಈ ವರ್ಷ 327 ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ!! ಇದನ್ನ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಮಾಹಿತಿ ನನಗೆ ಆಘಾತವುಂಟು ಮಾಡಿದೆ. ವೈದ್ಯ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಈ ಆಧುನಿಕ ಕಾಲದಲ್ಲಿಯೂ ಮಹಿಳೆಯರು ಆಸ್ಪತ್ರೆಗಳಲ್ಲಿಯೇ ಜೀವ ಚೆಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ. ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎನ್ನುವ ರಾಜ್ಯ ಕಾಂಗ್ರೆಸ್ ಸರ್ಕಾರ ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ. ಮಗುವಿಗೆ ಜನ್ಮ ನೀಡಲು ಸರಕಾರಿ ಆಸ್ಪತ್ರೆಗೆ ವಿಶ್ವಾಸದಿಂದ ತೆರಳುವ ಗೃಹಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ! ಇದೇನಾ ಮಹಿಳೆಯರ ಸಬಲೀಕರಣ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ. ಕಳಪೆ ಗ್ಲೂಕೋಸ್, ಔಷಧಗಳಿಂದ ಗೃಹಲಕ್ಷ್ಮೀಯರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಆಸ್ಪತ್ರೆಯಲ್ಲಿ IV ದ್ರಾವಣ, ಅಂದರೆ; ರಿಂಗರ್ ಲ್ಯಾಕ್ಟೇಟ್ ದ್ರಾವಣ (Ringer lactate infusion) ಪಡೆದ ಎರಡೇ ಗಂಟೆಯಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿದ್ದರೆನ್ನುವುದು ಕಳವಳಕಾರಿ. ಹಾಗಾದರೆ, ಈ ದ್ರಾವಣ ಪೂರೈಸಿದ ಕಂಪನಿ ಯಾವುದು? ಅದು ಯಾರದ್ದು? ಅನೇಕ ದಿನಗಳಿಂದ ಕಳಪೆ ಗ್ಲೂಕೋಸ್, ಔಷಧ ಪೂರೈಕೆ ಆಗುತ್ತಿದ್ದರೂ ಸರಕಾರ ಏನು ಮಾಡುತ್ತಿತ್ತು? ಇಷ್ಟು ಸೂಕ್ಷ್ಮ ವಿಚಾರವನ್ನು ಆರೋಗ್ಯ ಸಚಿವರು ಅಲಕ್ಷ್ಯ ಮಾಡಿದ್ದೇಕೆ? ಸಚಿವರಿಗೆ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಗೊತ್ತೇ ಇರಲಿಲ್ಲವೇ? ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಸಚಿವರ ಹೇಳಿಕೆ ಅನಪೇಕ್ಷಿತ. ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಾರಾಗಲಿಕ್ಕಲ್ಲ. ಅಗತ್ಯವಿರುವುದು ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ.
ಪಲಾಯನಕ್ಕಿಂತ ಪ್ರಾಯಶ್ಚಿತ್ತ ಮುಖ್ಯ. ಇಲಾಖೆಯನ್ನು ಸರಿ ಮಾಡುವುದು ಅವರ ಹೊಣೆ. ಗೃಹಲಕ್ಷ್ಮೀಯರ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ. ಈ ಮರಣಗಳಿಂದ ಸರಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್'ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ತುರ್ತಾಗಿ ಆಗಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
07/12/2024 12:52 pm