ಬೆಂಗಳೂರು: ಗಂಡನ ಮನೆಯನ್ನ ಗುರಿಯಾಗಿಸಿ ಮಾನಸಿಕ ಹಿಂಸೆ ನೀಡಿದಲ್ಲದೆ ಮನೆಯಲ್ಲಿದ್ದ 10 ಲಕ್ಷ ನಗದು ಹಾಗೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿರುವುದಾಗಿ ಆರೋಪಿಸಿ ಸೊಸೆ ವಿರುದ್ಧ ಅತ್ತೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪದ್ಮನಾಭನಗರದ ಕಮಲ ಎಂಬುವರು ನೀಡಿದ ದೂರಿನ ಮೇರೆಗೆ ಸೊಸೆ ಗೌತಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಮಲ ತನ್ನ ಮಗನಿಗೆ ಈ ಹಿಂದೆ ಯುವತಿಯೊಂದಿಗೆ ಎಂಗೇಜ್‌ಮೆಂಟ್ ಫಿಕ್ಸ್ ಮಾಡಿದ್ದರು. ಕೌಟುಂಬಿಕ ಕಾರಣಕ್ಕಾಗಿ ಎಂಗೇಜ್‌ಮೆಂಟ್ ಮೆಂಟ್ ರದ್ದಾಗಿತ್ತು. ಈ ವೇಳೆ ಸಂಬಂಧಿಕರಾಗಿದ್ದ ಗೌತಮಿಯೊಂದಿಗೆ ವಿವಾಹ ನಿಶ್ಚಯಿಸಿದ್ದರು. ಅದರಂತೆ ಕಳೆದ ಜುಲೈ 10 ರಂದು ಬನಶಂಕರಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು.
ಸೊಸೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ವರನ ಕಡೆಯವರು ನೀಡಿದ್ದರು. ಮದುವೆಯಾದ ಮೊದಲ ದಿನದಿಂದಲೂ ಗೌತಮಿ ಅತ್ತೆ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾಳೆ. ಮೊದಲೇ ನಿರ್ಧರಿಸಿದಂತೆ ಪತಿ ಅಮೆರಿಕಾಕ್ಕೆ ಕರೆದೊಯ್ಯಲು ಸಿದ್ದತೆ ನಡೆಸುವಾಗಲೇ ಪತ್ನಿ ತನ್ನ ವರಸೆ ಬದಲಿಸಿದ್ದಾಳೆ. ಮೆಡಿಕಲ್ ವೀಸಾದಡಿ ವಿದೇಶಕ್ಕೆ ಬರುತ್ತೇನೆ ಎಂದಿದ್ದಕ್ಕೆ ಪತಿ ಕುಟುಂಬಸ್ಥರು 50 ಸಾವಿರ ರೂಪಾಯಿ ಖರ್ಚು ಮಾಡಿ ವೀಸಾ ಮಾಡಿಸಿದ್ದರು.
ಅಮೆರಿಕಾಗೆ ತೆರಳಲು 1.25 ಲಕ್ಷ ರೂಪಾಯಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಹುಷಾರಿಲ್ಲ ಎಂದು ಸಬೂಬು ನೀಡಿ ಮನೆಯಲ್ಲಿದ್ದ 10 ಲಕ್ಷ ಹಣ, 18 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ತವರು ಮನೆ ಸೇರಿದ್ದಾಳೆ. ಗಂಡನ ಮನೆಗೆ ಕಿರುಕುಳ ನೀಡಿರುತ್ತಿರುವುದಾಗಿ ದೂರು ನೀಡುವುದಾಗಿ ಗಂಡನಿಗೆ ಧಮಕಿ ಹಾಕಿದ್ದಾಳೆ. ಮಗಳಿಗೆ ಬುದ್ಧಿ ಹೇಳುವಂತೆ ಆಕೆಯ ಪೋಷಕರಿಗೆ ಹೇಳಿದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಕಮಲ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಗೌತಮಿ ತನ್ನ ಹುಟ್ಟೂರಾದ ತಿರುಪತಿಯಲ್ಲಿ ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದುಬಂದಿದೆ.
PublicNext
23/08/2022 01:13 pm