ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾಲೇಜು ವಿದ್ಯಾರ್ಥಿ ಅರ್ಬಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳ ಪೈಕಿ 6 ಮಂದಿಯನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಾದ್, ಸಫಾನ್ ಉಲ್ಲಾಖಾನ್, ಜೈನುಲ್ಲಾಖಾನ್, ಸೈಯದ್ ಫೈಸಲ್, ಅನಾಸ್ ಖಾನ್, ಜೈದ್ ಖಾನ್ ಬಂಧಿತರು.
ಎಸ್ಕೇಪ್ ಆಗಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಕೊಲೆಗೆ ಕಾರಣವೇನು? ಎಂಬ ವಿಷಯ ಗೊತ್ತಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಈ ಹತ್ಯೆ ನಡೆದಿದೆ. ಆರೋಪಿ ಮಹಮ್ಮದ್ ಸಾದ್ ಎಚ್.ಬಿ.ಆರ್ ಲೇಔಟ್ ಪ್ರೊವಿನ್ಸ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಯಾಗಿದ್ದ. ಆಗಸ್ಟ್ 11 ರಂದು ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾದ್ ನೃತ್ಯ ಮಾಡಿದ್ದ. ಈ ವೇಳೆ ಸಾದ್‌ಗೆ ಕೊಲೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ಹಾಗೂ ಗೆಳೆಯರು ಚುಡಾಯಿಸಿ, ನೀನು ಕಾಲೇಜಿನ ವಿದ್ಯಾರ್ಥಿಯಲ್ಲ ಏಕೆ ಬಂದಿರುವೆ? ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಸಹ ಬೆಳೆದು ಸಾದ್ ಅರ್ಬಾಜ್ ಹಾಗೂ ಸ್ನೇಹಿತರಿಗೆ ವಾರ್ನ್ ಮಾಡಿ ಹೋಗಿದ್ದ. ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗುವ ಬಗ್ಗೆ ಕಾಲೇಜು ಮ್ಯಾನೇಜ್‌ಮೆಂಟ್ ಗಮನಕ್ಕೆ ಬಂದಿತ್ತು. ಆಡಳಿತ ಮಂಡಳಿ ಸಹ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳುವ ಕೆಲಸ ಮಾಡಿತ್ತು. ಆದರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮತ್ತೊಂದು ಕಡೆ ಅರ್ಬಾಜ್ ಹಾಗೂ ಗೆಳೆಯರ ಮೇಲೆ ರೊಚ್ಚಿಗೆದ್ದಿದ್ದ ಸಾದ್ ಕಾರ್ಯಕ್ರಮದ ಮಾರನೇ ದಿನ ತನ್ನ ಜೊತೆ ಏಳು ಮಂದಿ ಕರೆದುಕೊಂಡು ಬಂದಿದ್ದ. ಕಾಲೇಜು ಬಳಿ ಪಿಯುಸಿ ಹಾಗೂ ಡಿಗ್ರಿ ಹುಡುಗರ ನಡುವೆ ಮಾರಾಮಾರಿ ಶುರುವಾಗಿತ್ತು. ಗಲಾಟೆ ಅತಿರೇಕಕ್ಕೆ ತಿರುಗಿ ಆರೋಪಿ ಸಾದ್, ಅರ್ಬಾಜ್ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದ.
ಅರ್ಬಾಜ್ ಕೊಲೆಗೆ ಆರೋಪಿ ಸಾದ್ ಹತ್ಯೆಗೆ ಬಳಸಿದ ವೆಪನ್ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಯಾಕೆಂದ್ರೆ ಸಾದ್ ಬಳಸಿದ್ದು ಪೆನ್ನಿನ ಹಿಂಭಾಗದಲ್ಲಿ ಚೂರಿಯನ್ನ. ಆಶ್ಚರ್ಯ ಎನ್ನಿಸಿದ್ರು ಇದು ಸತ್ಯ. ಇದೇ ವರ್ಷ ಫೆಬ್ರವರಿಯಲ್ಲಿ ಸಾದ್ ಆನ್‌ಲೈನ್‌ನಲ್ಲಿ ಈ ಪೆನ್ನನ್ನು ದೆಹಲಿಯಿಂದ ತರಿಸಿದ್ದ. ಇದೇ ಪೆನ್ನು ಬಳಸಿ ಈಗ ಅರ್ಬಾಜ್‌ನನ್ನು ಹತ್ಯೆ ಮಾಡಿದ್ದಾನೆ. ಈ ಹಿಂದೆ ಯಾವ ಹಂತಕರು ಸಹ ಇಂತಹ ಪೆನ್ ವೆಪನ್ ಬಳಸಿ ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೂ ಸಹ ಮಾಹಿತಿ ಇಲ್ಲ. ಸದ್ಯ ಕೊಲೆಗೆ ಬಳಸಿದ ಪೆನ್ ವೆಪನ್‌ಅನ್ನು ಸಹ ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
PublicNext
17/08/2022 08:30 pm