ಬೆಂಗಳೂರು: ಈ ಹಿಂದೆ ಬೆಂಗಳೂರು ಉತ್ತರ ಉಪ ವಿಭಾಗ ಅಧಿಕಾರಿಯಾಗಿದ್ದ ಕೆ.ರಂಗನಾಥ್ ರವರ ಮನೆ, ಕಚೇರಿ & ಸಂಬಂಧಿಕರಿಗೆ ಸೇರಿದ ಐದು ಕಡೆಗಳಲ್ಲಿ ACB ದಾಳಿ ನಡೆಸಿದೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ದಾಖಲೆ ಮತ್ತು ನಗದು ಪತ್ತೆಯಾಗಿವೆ ಎನ್ನಲಾಗಿದೆ.
ಯಲಹಂಕದ ಪ್ರತಿಷ್ಠಿತ ನ್ಯಾಯಾಂಗ ಬಡಾವಣೆಯ ಕೋಟ್ಯಾಂತರ ಬೆಲೆಯ ಮನೆ ಮೇಲೆ ದಾಳಿ ನಡೆದಿದೆ. ಇನ್ನು ದೊಡ್ಡಬಳ್ಳಾಪುರ ನಗರದ ಮನೆ, ಕನಕ ಟ್ರಸ್ಟ್ ಕಚೇರಿ, ಅಕ್ಷರ ಶಾಲೆ ಹಾಗೂ ನಾಗರಬಾವಿಯ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ.
ಐದು ತಂಡಗಳ 40ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಪ್ರಸ್ತುತ ಪ್ರಧಾನ ವ್ಯವಸ್ಥಾಪಕರು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಬೆಂಗಳೂರು ಉತ್ತರದ ಉಪ ವಿಭಾಗಾಧಿಕಾರಿಯಾಗಿದ್ದಾಗ ಸರ್ಕಾರಿ ಗೋಮಾಳ, ಜಮೀನುಗಳನ್ನು ಭೂ ಮಾಫಿಯಾಕ್ಕೆ ಅಕ್ರಮವಾಗಿ ನೂರಾರು ಕೋಟಿ ಆಸ್ತಿಯ ಪರಭಾರೆ ಮಾಡಿಕೊಟ್ಟಿದ್ದರು ಎಂಬ ದೂರುಗಳು ಬಂದಿದ್ದವು ಎನ್ನಲಾಗಿದೆ. ಕಿರಿಯ ಅಧಿಕಾರಿಗಳಿಂದ ಯಾವುದೇ ವರದಿ ಪಡೆದುಕೊಳ್ಳದೇ ಅಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ಮೊದಲು 2012ರಲ್ಲಿ ಯಲಹಂಕದ ಗ್ರೇಡ್ 2 ತಹಶೀಲ್ದಾರ್ ಆಗಿದ್ದಾಗಲೂ ಭ್ರಷ್ಟಾಚಾರದಲ್ಕಿ ತೊಡಗಿ ಲೋಕಾಯುಕ್ತ ದಾಳಿಗೆ ಒಳಗಾಗಿ ಸಸ್ಪೆಂಡ್ ಆಗಿದ್ದರು. ಈಗ ACB ಸರದಿಯಷ್ಟೇ.
ಅಪಾರ ಪ್ರಮಾಣದಲ್ಲಿ ಪತ್ತೆಯಾಗಿರುವ ಚಿನ್ನಾಭರಣ ತೂಕ ಮಾಡಲು ಅಕ್ಕಸಾಲಿಗರನ್ನ ಕರೆಸಿಕೊಂಡು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದರೆ ರಂಗನಾಥನ ಭ್ರಷ್ಟಾಚಾರದ ಕೂಪ ಎಷ್ಟಿರಬಹುದು ನೀವೇ ಊಹಿಸಿ!
PublicNext
26/03/2022 10:27 am