ವರದಿ: ಹರೀಶ್ ಗೌತಮನಂದ
ಆನೇಕಲ್: ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿದಾಸ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಎಸ್‌ಪಿ ವಂಶಿಕೃಷ್ಣ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸೂರ್ಯ, ಅಶೋಕ್ ಹಾಗೂ ಇನ್ನೋರ್ವ ಬಾಲಾಪರಾಧಿ ಸೇರಿದಂತೆ ಮೂರು ಜನ ಬಂಧಿತ ಅರೋಪಿಗಳು.
ಫೆಬ್ರವರಿ 23ನೇ ತಾರೀಖಿನಂದು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬರಗಾರನಹಳ್ಳಿ ಬಳಿ ಗೋಪಾಲ್ ರೆಡ್ಡಿ ಬಿಲ್ಡಿಂಗ್‌ನಲ್ಲಿ ಕಾಳಿದಾಸ ಟೀ ಕುಡಿಯುವಾಗ ಮೂರು ಜನ ಬೈಕ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಅತ್ತಿಬೆಲೆ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅಸಲಿಯತ್ತು ಗೊತ್ತಾಗಿದೆ.
ಕಾಳಿದಾಸ 15 ವರ್ಷಗಳ ಹಿಂದೆ ನಂದಿನಿ ಎಂಬಾಕೆಯನ್ನು ಮದುವೆಯಾಗಿದ್ದರು. ಕಳೆದ ಒಂದು ವರ್ಷಗಳಿಂದ ಇಬ್ಬರ ಮಧ್ಯೆ ಜಗಳ ನಡೆದಿತ್ತು. ನಂದಿನಿ ತವರು ಮನೆ ಸೇರಿದ್ದಳು. ಕಾಳಿದಾಸ ನಂದಿನಿಗೆ ಡೈವರ್ಸ್ ನೋಟಿಸ್ ಕಳಿಸಿದ್ದ. ಹೀಗಾಗಿ ನಂದಿನಿಯ ತಮ್ಮ ಸೂರ್ಯ ಕಾರಣ ಕೇಳಲು ಹೋದಾಗ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಜೊತೆಗೆ ಕಾಳಿದಾಸನಿಗೆ ಬೇರೆ ಮಹಿಳೆ ಜೊತೆ ಸಂಬಂಧದ ಇದೆ ಎಂಬ ಬಗ್ಗೆ ಸೂರ್ಯನಿಗೆ ಗೊತ್ತಾಗಿದೆ. ಈ ಕಾರಣಕ್ಕೆ ತನ್ನ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ್ದೇವೆ ಎಂದು ತನಿಖೆಯಲ್ಲಿ ಬಾಯಿಬಿಟ್ಟಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
25/03/2022 04:25 pm