ಚಿತ್ರದುರ್ಗ : ಸರ್ಕಾರಿ ನೌಕರಿ ಆಸೆಗೆ ಪತ್ನಿಯೇ ಪತಿಯ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಅಂತ್ಯಕ್ರಿಯೆ ಮಾಡಿ 4 ತಿಂಗಳ ಬಳಿಕ ತಹಶೀಲ್ದಾರ್ ಡಾ. ನಾಗವೇಣಿ ಸಮ್ಮುಖದಲ್ಲಿ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಚಿತ್ರದುರ್ಗ ನೆಹರು ನಗರದ ನಿವಾಸಿಯಾಗಿದ್ದ ಮೊಳಕಾಲ್ಮೂರು ತಾಲ್ಲೂಕು ಕಚೇರಿಯಲ್ಲಿ ಎಸ್‌ಡಿಎ ಹುದ್ದೆಯಲ್ಲಿದ್ದ ಸುರೇಶ್ (46) 2024 ರ ಅಕ್ಟೋಬರ್ 7ರಂದು ಮೃತಪಟ್ಟಿದ್ದರು. ಚಿತ್ರದುರ್ಗದಲ್ಲಿ ಸುರೇಶ್ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಸುರೇಶನದು ಸಹಜ ಸಾವಲ್ಲ. ಸೊಸೆಯಿಂದಲೇ ನನ್ನ ಮಗನ ಕೊಲೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿ ಸುರೇಶನ ತಾಯಿ ಸರೋಜಮ್ಮ 2024 ಅಕ್ಟೋಬರ್ 22 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದರು. ಪೊಲೀಸರು ನಿರ್ಲಕ್ಷ್ಯ ವಹಿಸಿದ ಕಾರಣ ನ್ಯಾಯಕ್ಕಾಗಿ ಆಗ್ರಹಿಸಿ ಕಳೆದ ವಾರ ಚಿತ್ರದುರ್ಗಕ್ಕೆ ಆಗಮಿಸಿದ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರಿಗೆ ಸರೋಜಮ್ಮ ದೂರು ಸಲ್ಲಿಸಿದರು.
ದೂರು ಹಿನ್ನೆಲೆ ಮರಣೋತ್ತರ ಪರೀಕ್ಷೆ ಮಾಡಿ ತನಿಖೆ ನಡೆಸಲು ಪೊಲೀಸರಿಗೆ ಉಪಲೋಕಾಯುಕ್ತರು ಆದೇಶ ನೀಡಿದ್ದರು. ಈ ಹಿನ್ನೆಲೆ ನಗರದ ಕನಕ ವೃತ್ತದ ಬಳಿಯ ಸ್ಮಶಾನದಿಂದ ಸುರೇಶ್ ಅವರ ಮೃತ ದೇಹ ಹೊರ ತೆಗೆದು ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಸುರೇಶನ ತಾಯಿ ಮಗನ ಸಮಾಧಿ ಮೇಲೆ ಬಿದ್ದು ದುಃಖದಲ್ಲಿ ಗೋಳಾಡಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.
PublicNext
05/02/2025 06:42 pm