ಧಾರವಾಡ: ಅನ್ನದಾಸೋಹ, ವಿದ್ಯಾದಾಸೋಹದ ಮೂಲಕ ಪ್ರಸಿದ್ಧಿ ಪಡೆದ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ರಥೋತ್ಸವಗಳಲ್ಲಿ ಒಂದಾದ ಧಾರವಾಡ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮುರುಘಾಮಠದಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸೋಮವಾರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಧಾರವಾಡ ಸೇರಿದಂತೆ ಅನೇಕ ಗ್ರಾಮಗಳಿಂದಲೂ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದರು. ಬಂದ ಭಕ್ತಾದಿಗಳಿಗೆಲ್ಲ ಮುರುಘಾಮಠದ ಆವರಣದಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸಂಜೆ 4 ಗಂಟೆ ಸುಮಾರಿಗೆ ಮುರುಘಾಮಠದಿಂದ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ವಿವಿಧ ಮಠಾಧೀಶರು ಚಾಲನೆ ನೀಡಿದರು. ತೇರು ಮಠದಿಂದ ಡಿಪೋ ಸರ್ಕಲ್‌ವರೆಗೂ ಸಾಗಿ ಬಂತು. ಅಲ್ಲಿ ಸೇರಿದ್ದ ಸಾವಿರಾರು ಭಕ್ತರು ತೇರಿಗೆ ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣು ತೂರಿ ಭಕ್ತಿಯ ನಮನ ಸಲ್ಲಿಸಿದರು. ಅನೇಕರು ತೇರನ್ನು ಎಳೆದು ಪುನೀತರಾದರು. ಜಾತ್ರಾ ಮಹೋತ್ಸವದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
Kshetra Samachara
03/02/2025 08:52 pm