ಹೊಸದಿಲ್ಲಿ : ಚುನಾವಣೆ ಬಾಂಡ್ ಯೋಜನೆ ಹೆಸರಲ್ಲಿ ಸುಲಿಗೆ ಮಾಡಿರುವ ಆರೋಪ ಸಂಬಂಧ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸುಪ್ರೀಂ ಕೋರ್ಟ್‌ನಿಂದ ನಿರಾಳತೆ ಸಿಕ್ಕಿದೆ. ನಳಿನ್ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕಟೀಲ್ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಆ ಮೂಲಕ ಇದೀಗ ನಳಿನ್ ಕುಮಾರ್ ಕಟೀಲುಗೆ ಬಿಗ್ ರಿಲೀಫ್ ನೀಡಲಾಗಿದೆ.
ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಜನಾಧಿಕಾರ ಸಂಘರ್ಷ ಪರಿಷತ್ತಿನ ಆದರ್ಶ ಅಯ್ಯರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸೋಮವಾರ ವಿಚಾರಣೆ ಮಾಡಿದ್ದು, ಅಸ್ಪಷ್ಟ ದೂರು, ಸಂಪೂರ್ಣ ಊಹೆಯ ದೂರು ಎಂದು ಹೇಳಿದೆ. ಆ ಮೂಲಕ ಮೇಲ್ಮನವಿಯನ್ನು ವಜಾಗೊಳಿಸಿದೆ.
ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ಹಲವರ ವಿರುದ್ಧ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಚುನಾವಣಾ ಬಾಂಡ್‌ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಸಂಘಟನೆಯ ಆದರ್ಶ ಅಯ್ಯರ್ ಎಂಬುವವರು ದೂರು ನೀಡಿದ್ದರು.
PublicNext
04/02/2025 01:45 pm