ಬೈಲಹೊಂಗಲ: ಬೈಲಹೊಂಗಲ ಪಟ್ಟಣದ ಇತಿಹಾಸ ಪ್ರಸಿದ್ಧ ದೊಡ್ಡ ಕೆರೆಯಲ್ಲಿ ಸುಮಾರು 300ಕ್ಕೂ ಅಧಿಕ ಸಂಖ್ಯೆಯಲ್ಲಿ ಬಾತುಕೋಳಿ ಮರಿಗಳನ್ನು ಕೆರೆಗೆ ಬಿಟ್ಟಿರುವುದು ನೋಡುಗರ ಆಕರ್ಷಣೆಗೆ ಒಳಗಾಗಿದೆ. ಇದರಿಂದ ಪಶು, ಪಕ್ಷಿ, ಪ್ರಾಣಿ ಪ್ರಿಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರುವ ಸ್ಥಳೀಯ ಪುರಸಭೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ಎರಡು ತಿಂಗಳು ಹಿಂದೆ ಕೆರೆಗೆ ಬಿಟ್ಟಿರುವ ಒಂದು ತಿಂಗಳಿನ ಬಾತುಕೋಳಿ ಮರಿಗಳು ಪಿಸುಗುಟ್ಟುತ್ತ ಕೆರೆಯಲ್ಲಿ ಹೆಜ್ಜೆ ಹಾಕುತ್ತ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿವೆ. ಇದೇ ಮೊದಲ ಬಾರಿಗೆ ಕೆರೆಗೆ ಬಾತುಕೋಳಿ ಮರಿಗಳು ಬಂದಿರುವುದನ್ನು ನೋಡಲು ಸಾಕಷ್ಟು ಜನ ಕೆರೆಗೆ ಧಾವಿಸುತ್ತಿದ್ದಾರೆ. ಕೆರೆಯಲ್ಲಿ ಸಾಲು, ಸಾಲಾಗಿ ಮುಂದೆ ಸಾಗುತ್ತಿರುವ ಬಾತುಕೋಳಿ ಮರಿಗಳೊಂದಿಗೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ವಾಯುವಿಹಾರಿಗಳು, ಕೆರೆ ಸುತ್ತಮುತ್ತಲಿನ ನಿವಾಸಿಗಳು ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬಾತುಕೋಳಿ ಮರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪುರಸಭೆ ಹಾಗೂ ಕೆಲವು ದಾನಿಗಳ ಸಹಕಾರದಿಂದ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳನ್ನು ಪುರಸಭೆ ಸಿಬ್ಬಂದಿಯಾದ ಸುರೇಶ ನಿಂಗನ್ನವರ, ಭೀಮಪ್ಪ ಹರಿಜನ ಪಾಲನೆ ಮಾಡುತ್ತಿದ್ದು, ಪ್ರತಿ ನಿತ್ಯ ಮೂರು ಬಾರಿ ಅಕ್ಕಿ, ಜೋಳ, ನವನಿ ಸೇರಿ ಇನ್ನೂ ಹಲವು ಬಗೆಯ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ದಾನಿಗಳು ಕೂಡ ಆಹಾರ ಸಾಮಗ್ರಿ ನೀಡುತ್ತಿದ್ದಾರೆ. ಇವರಿಬ್ಬರೂ ಕರೆದರೆ ಕೆರೆಯ ಯಾವ ದಿಕ್ಕಿನಲ್ಲಿದ್ದರೂ ಎಲ್ಲ ಬಾತುಕೋಳಿ ಮರಿಗಳು ಒಂದೆಡೆ ಸೇರಿ ಆಹಾರ ಸಾಮಗ್ರಿ ಸೇವಿಸುತ್ತವೆ. ಇದು ನೋಡುಗರ ಕಣ್ಣಿಗೆ ಮುದ ನೀಡುತ್ತಿದೆ.
ಶರೀಫ ನದಾಫ ಪಬ್ಲಿಕ್ ನೆಕ್ಸ್ಟ್ ಬೈಲಹೊಂಗಲ
PublicNext
03/02/2025 02:37 pm