ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಗೋವು ರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿರೋಧ ನೀತಿಗೆ ಖಂಡನೆ - ಜಗದೀಶ ಬೂದಿಹಾಳ

ಬೈಲಹೊಂಗಲ: ಭಾರತೀಯ ಸಂಸ್ಕೃತಿಯಲ್ಲಿ ಗೋವು ಆಧಾರಿತ ಕೃಷಿ ಒಂದು ಬಹು ಮುಖ್ಯವಾದ ವಿಚಾರ, ಗೋವುಗಳಿಗೆ‌ ಮತ್ತು ಮನುಷ್ಯರಿಗೆ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧ. ಭಾರತೀಯ ಪರಂಪರೆಯಲ್ಲಿ ಗೋ ಮಾತೆಗೆ ತನ್ನದೆ ಆದ ಸ್ಥಾನವಿದೆ. ಈ ದೇಶದಲ್ಲಿ ಕೃಷಿ ಏನಾದರು ಉಳಿದಿದ್ದರೆ, ಅದು ಗೋ ಮಾತೆಯ ಕಾಣಿಕೆ. ಆದರೆ, ರಾಜ್ಯದ ಕೋಟ್ಯಾಂತರ ಜನರ ಭಾವನೆಗಳೊಂದಿಗೆ ಬೆರೆತಿರುವ ಗೋ ಮಾತೆಯನ್ನು ಸಂರಕ್ಷಣೆಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಜಗದೀಶ ಬೂದಿಹಾಳ ಹೇಳಿದರು.

ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ರಾಜ್ಯಾದ್ಯಂತ ಒಟ್ಟು 15 ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ಪ್ರಾರಂಭಿಸಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರವು ಬಹು ಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಗೋ ಶಾಲೆಗಳಿಗೆ ಅನುದಾನಗಳನ್ನು ಕಡಿತಗೊಳಿಸಿ ಅದರ ಮೂಲ ಉದ್ದೇಶಗಳಿಗೆ  ತೊಂದರೆಕೊಡುವ ಮೂಲಕ‌ ಗೋ ಶಾಲೆಗಳನ್ನು ಮುಚ್ಚಲು ಹೊರಟಿರುವುದು ರಾಜ್ಯದ ಮತದಾರರಿಗೆ ಮಾಡಿರುವ  ಅನ್ಯಾಯವಾಗಿದೆ.

ರಾಜ್ಯದಲ್ಲಿ 1.10 ಕೋಟಿ ಜಾನುವಾರುಗಳಿದ್ದು, ಇವುಗಳ ಸಂರಕ್ಷಣೆಮಾಡಲು ಮತ್ತು ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸಾಕಷ್ಟು ಕೇಂದ್ರ ಪುರಸ್ಕೃತ ಯೋಜನೆಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳನ್ನು ಅನುಷ್ಟಾನಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ.

ಗೋ ಶಾಲೆಗಳನ್ನು ಮುಚ್ಚುವ ಮುಖಾಂತರ ಗೋ ಕಳ್ಳ ಸಾಗಣೆಯನ್ನು ಉತ್ತೇಜನ ನೀಡುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯ ರೈತ ಮೋರ್ಚಾವು ಸರ್ಕಾರವನ್ನು ಒತ್ತಾಯಿಸುವುದೇನೆಂದರೆ ಗೋ ಶಾಲೆಗಳನ್ನು ಪುನರಾರಂಭಿಸಬೇಕು, ಗೋ ಶಾಲೆಗಳಿಗೆ ವಿಶೇಷ ಅನುದಾನವನ್ನು ನೀಡಬೇಕು, ಕೇಂದ್ರ ಪುರಸ್ಕೃತ ಗೋ ಆಧಾರಿತ ಯೋಜನೆಗಳನ್ನು ಶೀಘ್ರ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕು, ಈ ರಾಜ್ಯದ ಬಹು ಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗದ ರೀತಿ ನಡೆದುಕೊಳ್ಳಬೇಕು. ಈ ಮೇಲ್ಕಂಡ ಅಂಶಗಳನ್ನು ರಾಜ್ಯ ಸರ್ಕಾರ ಗಮನಿಸದಿದ್ದರೆ ರಾಜ್ಯ ರೈತ ಮೋರ್ಚಾದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಹಾಗೂ ಬಿಜೆಪಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/01/2025 02:33 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ