ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜನವರಿ 17ರಿಂದ ‘ಕರ್ನಾಟಕ ಕ್ರೀಡಾಕೂಟ-2025’- ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಕರ್ನಾಟಕ ಕ್ರೀಡಾಕೂಟ-2025’ ಜನವರಿ 17ರಿಂದ 23ರ ವರೆಗೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಸಮಾರೋಪಕ್ಕೆ ಗೃಹ ಸಚಿವ ಪರಮೇಶ್ವರ್‌ ಆಗಮಿಸಲಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಕರ್ನಾಟಕ ಒಲಿಂಪಿಕ್‌ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ., ಉಡುಪಿ ಜಿಲ್ಲಾಡಳಿತ ವತಿಯಿಂದ ಈ ಪ್ರತಿಷ್ಠಿತ ಕ್ರೀಡಾಕೂಟ ಆಯೋಜಿಸಲಾಗಿದ್ದು, ಗುರುವಾರ ನಗರದಲ್ಲಿ ವಿಧಾನಸಭೆಯ ಸ್ಪೀಕರ್‌ ಖಾದರ್ ಅವರು ರಾಜ್ಯದ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ಆಯೋಜಿಸಿದ್ದರು.

ಬಳಿಕ ಮಾಹಿತಿ ನೀಡಿದ ಸ್ಪೀಕರ್‌ ಹಾಗೂ ಕ್ರೀಡಾಕೂಟದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಯು.ಟಿ. ಖಾದರ್, ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಆಟಗಾರರ ಸಹಿತ ಒಟ್ಟು 3,247 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 25 ಕ್ರೀಡೆಗಳು ಈ ಕ್ರೀಡಾಕೂಟದಲ್ಲಿದೆ.

ಜನವರಿ 17ರಂದು ಸಂಜೆ 5 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಇದಕ್ಕೂ ಮೊದಲು ನಗರದ ಪಿವಿಎಸ್ ಕಲಾಕುಂಜ ಮುಂಭಾಗದಿಂದ ಮೈದಾನವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ವಿವಿಧ ಅಕಾಡೆಮಿಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.

ಜನವರಿ 23ರಂದು ಸಂಜೆ 4.30ಕ್ಕೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸುವರು. ಕ್ರೀಡಾಕೂಟದ ಅವಧಿಯಲ್ಲಿ 3,247 ಸ್ಪರ್ಧಿಗಳು, 599 ಮಂದಿ ಕ್ರೀಡಾ ತಾಂತ್ರಿಕ ಅಧಿಕಾರಿಗಳು ಸಹಿತ ಒಟ್ಟು 4,250 ಮಂದಿ ವಾಸ್ತವ್ಯ ಹೂಡಲು ಉಭಯ ಜಿಲ್ಲೆಗಳಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ವಿವರಿಸಿದರು.

ಕ್ರೀಡಾಕೂಟಕ್ಕೆ 5 ಕೋಟಿ ರೂಪಾಯಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಯು.ಟಿ. ಖಾದರ್‌ ತಿಳಿಸಿದರು.

Edited By : Vinayak Patil
PublicNext

PublicNext

10/01/2025 07:16 am

Cinque Terre

17.59 K

Cinque Terre

0

ಸಂಬಂಧಿತ ಸುದ್ದಿ