ಬೆಂಗಳೂರು: ಕೋಳಿ ತಿಂದ ಕಾರಣಕ್ಕಾಗಿ ನಾಯಿಯನ್ನ ಥಳಿಸಿ ಕೊಂದಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಕೋಳಿಯನ್ನ ತಿಂದಿದೆ ಎಂದು ಆರೋಪಿಸಿ ಮನೆ ಮುಂಭಾಗ ಕಟ್ಟಿ ಹಾಕಲಾಗಿದ್ದ ನಾಯಿಯನ್ನ ವ್ಯಕ್ತಿಯೋರ್ವ ಕೋಲಿನಿಂದ ಹೊಡೆದು ಸಾಯಿಸಿದ್ದಾನೆ. ನಾಯಿಯನ್ನ ಸಾಯಿಸಿದನ್ನ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ವ್ಯಕ್ತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರ ವಡೇರಹಳ್ಳಿ ನಿವಾಸಿ ಪುಷ್ಪಾಲತಾ ನೀಡಿದ ದೂರಿನ ಮೇರೆಗೆ ಎದುರು ಮನೆಯ ನಿವಾಸಿ ಮನೋಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತನನ್ನ ವಿಚಾರಣೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಆಶಾ ಕಾರ್ಯಕರ್ತೆಯಾಗಿರುವ ಪುಷ್ಪಲತಾ ಒಂದು ವರ್ಷದ ಜರ್ಮನ್ ಶೆಫರ್ಡ್ ಶ್ವಾನದ ಜೊತೆಗೆ ಹಸು ಹಾಗೂ ಕೋಳಿಗಳನ್ನ ಸಾಕುತ್ತಿದ್ದರು. ಪ್ರತಿದಿನ ಬೆಳಗ್ಗೆ ಆಹಾರ ನೀಡಿ ಕೆಲಸಕ್ಕೆ ಹೋಗುತ್ತಿದ್ದರು. ಡಿ.24ರಂದು ಮನೆ ಮುಂಭಾಗ ಸಾಕುನಾಯಿಯನ್ನ ಕಟ್ಟಿಹಾಕಿ ಪುಷ್ಪಲತಾ ಕೆಲಸಕ್ಕೆ ಹೋಗಿದ್ದು ಸಂಜೆ ಮನೆಗೆ ಹಿಂತಿರುಗಿದಾಗ ಶ್ವಾನದ ಕಣ್ಣು ಹಾಗೂ ಬಾಯಿಗೆ ಗಾಯವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳದೆ ಜ.3ರಂದು ನಾಯಿ ಮೃತಪಟ್ಟಿತ್ತು. ತಮ್ಮ ತೋಟದಲ್ಲಿ ಸಾಕುನಾಯಿಯನ್ನ ಪುಷ್ಪಲತಾ ಅಂತ್ಯಸಂಸ್ಕಾರ ಮಾಡಿದ್ದರು.
ಏಕಾಏಕಿ ರಕ್ತಗಾಯವಾಗಿ ಅನಾರೋಗ್ಯದಿಂದ ಮೃತಪಟ್ಟಿರುವುದರ ಬಗ್ಗೆ ಅನುಮಾನ ಬಂದು ಮನೆ ಮುಂದೆ ಅಳವಡಿಸಿದ್ದ ಸಿಸಿ ಟಿವಿ ಪರಿಶೀಲಿಸಿದಾಗ ಆರೋಪಿ ಮನೋಜ್, ಕೋಲಿನಿಂದ ಮನಬಂದಂತೆ ಥಳಿಸಿರುವುದು ಸೆರೆಯಾಗಿತ್ತು. ಹಲ್ಲೆ ಪ್ರಶ್ನಿಸಿ ಮನೋಜ್ ನನ್ನ ಪ್ರಶ್ನಿಸಿದಾಗ ಅಸಭ್ಯವಾಗಿ ಮಾತನಾಡಿ ಹಲ್ಲೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮನೋಜ್ ಸಾಕುತ್ತಿದ್ದ ಕೋಳಿಯನ್ನ ಶ್ವಾನ ತಿಂದಿರುವುದು ಕಂಡುಬಂದಿತ್ತು. ಇದರಿಂದ ಆಕ್ರೋಶಗೊಂಡು ನಾಯಿಗೆ ಥಳಿಸಿರುವುದನ್ನ ಒಪ್ಪಿಕೊಂಡಿದ್ದಾನೆ. ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
09/01/2025 08:58 pm