ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಶರಣಾಗತರಾಗಿದ್ದ 6 ಮಂದಿ ನಕ್ಸಲರನ್ನು ರಾಜ್ಯ ಪೊಲೀಸರು ವಶಕ್ಕೆ ಪಡೆದು ಕಾನೂನು ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ. ಇಂದು ಬೆಳಗ್ಗೆ ಮಡಿವಾಳದ ಟೆಕ್ನಿಕಲ್ ಸೆಂಟರ್ ನಲ್ಲಿ ಇರಿಸಿ ವಿಚಾರಣೆ ನಡೆಸಿ ಚಿಕ್ಕಮಗಳೂರು ಪೊಲೀಸರ ಜೊತೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ನಕ್ಸಲೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ಸರ್ಕಾರದ ಶರಣಾಗತಿ ನೀತಿಯಂತೆ ಇದುವರೆಗೂ ಭಾಗಿಯಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಹಾಗೂ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಬಗ್ಗೆ ಅಧಿಕೃತವಾಗಿ ಸ್ವಯಂ ಹೇಳಿಕೆಗಳನ್ನು ಪಡೆಯಲಾಯಿತು. ಆರೋಪಿಗಳ ವಿರುದ್ಧ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿನ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದ ತಂಡ ವಿಚಾರಣೆ ನಡೆಸಿದೆ.
ಆರು ಮಂದಿ ವಿರುದ್ಧ ಎನ್ಐಎ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ರು. ಸದ್ಯ ನ್ಯಾಯಲಯ ಆರು ಮಂದಿ ನಕ್ಸಲರನ್ನು ಜನವರಿ 30ರ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಬಾಡಿ ವಾರೆಂಟ್ ಮೇಲೆ ವಶಕ್ಕೆ ಕೇಳುವ ಸಾಧ್ಯತೆಯಿದೆ.
ಇನ್ನೂ ಶರಣಾಗತಿ ಬಳಿಕ ಏನೆಲ್ಲ ಕ್ರಮ ಇರುತ್ತೆ ಅನ್ನೋದನ್ನ ನೋಡೋದಾದ್ರೆ...ನಕ್ಸಲ್ ಶರಣಾಗತಿ ನೀತಿ ಪ್ರಕಾರ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ನಕ್ಸಲರು ತಾವು ನಡೆಸುತ್ತಿದ್ದ ನಕ್ಸಲ್ ಚಟುವಟಿಕೆ ಪ್ರಕಾರ ಪೂರ್ಣ ಮಾಹಿತಿ ನೀಡಬೇಕು. ಭೂಗತವಾಗಿರುವ ಎಲ್ಲಾ ಸದಸ್ಯರ ಹೆಸರುಗಳನ್ನ ಬಹಿರಂಗಪಡಿಸಬೇಕಿದೆ. ಶರಣಾದವರ ಈ ಸ್ವಇಚ್ಛಾ ಹೇಳಿಕೆಯನ್ನು ಇನ್ ಕ್ಯಾಮೆರಾ ವಿಧಾನದಲ್ಲಿ ದಾಖಲಿಸಬೇಕು. ಬಳಿಕ ಶರಣಾಗತಿ ವರದಿ ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು. ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಿ ಕೊಡಬೇಕು. ಅನುಮತಿ ದೊರೆತ ಬಳಿಕ ಸರ್ಕಾರ ಘೋಷಿಸಿರುವ ವಿಶೇಷ ಸೌಲಭ್ಯವನ್ನು ಜಿಲ್ಲಾ ಸಮಿತಿ ನೀಡಬೇಕೆಂದು ಸ್ಪಷ್ಟವಾಗಿ ಹೇಳಿದೆ.
ಶರಣಾಗತರಾದ ಎಲ್ಲಾ ಸದಸ್ಯರ ಮೇಲೆ ಎರಡು ವರ್ಷಗಳ ಅವಧಿಯವರೆಗೆ ನಿಗಾ ವಹಿಸಲಾಗುತ್ತದೆ. ರಾಜ್ಯ ಆಂತರಿಕ ಭದ್ರತಾ ಪಡೆ (ಐಎಸ್ ಡಿ) ಡಿವೈಎಸ್ಪಿ ಅಧಿಕಾರಿಯೊಬ್ಬರು ಆರು ಮಂದಿ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾ ವಹಿಸಿ ತಿಂಗಳಿಗೊಮ್ಮೆಯಂತೆ ಎರಡು ವರ್ಷದವರೆಗೆ ವರದಿಯನ್ನು ಸರ್ಕಾರಕ್ಕೆ ನೀಡಬೇಕಿದೆ.
ರಾಜ್ಯ ನಕ್ಸಲ್ ನಿರ್ಮೂಲನೆ ಹಾದಿಯಲ್ಲಿದ್ದು, ಶರಣಾಗತಿಯಾದ ಗುಂಪಿನಲ್ಲಿದ್ದ ಶೃಂಗೇರಿ ಮೂಲದ ನಕ್ಸಲ್ ರವೀಂದ್ರ ತಲೆಮರೆಸಿಕೊಂಡಿದ್ದಾನೆ. ಎರಡು ತಿಂಗಳಿಂದ ಆರು ಮಂದಿಯೊಂದಿಗೆ ಸಂಪರ್ಕ ಸಾಧಿಸಿಲ್ಲ. ರಾಜ್ಯದ ನಕ್ಸಲ್ ಪಟ್ಟಿಯಲ್ಲಿ ರವೀಂದ್ರ ಹೆಸರಿದ್ದು, ಇನ್ನೊಂದು ವಾರದಲ್ಲಿ ಈತನ ಸಂಪರ್ಕ ಸಾಧಿಸಿ ಮುಖ್ಯವಾಹಿನಿಗೆ ಬರುವಂತೆ ಮನವೊಲಿಸಲಾಗುವುದು ಎಂದು ನಕ್ಸಲ್ ನೀತಿ ಹಾಗೂ ಪುನರ್ ವಸತಿ ಸಮಿತಿ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
PublicNext
09/01/2025 08:44 pm