ಬೈಲಹೊಂಗಲ- ಪಟ್ಟಣದಲ್ಲಿ ನೂತನ ಶಿಲಾಮಠವನ್ನು ನಿರ್ಮಿಸುವ ಮೂಲಕ ಭಕ್ತರಿಗೆ ಇನ್ನಷ್ಟು ಧಾರ್ಮಿಕ ಸಂಸ್ಕಾರವನ್ನು ನೀಡಲು ಪಣತೊಟ್ಟಿರುವ ಮಡಿವಾಳೇಶ್ವರರ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರಿನ ಕೈಲಾಸ ಆಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರ ಪುರಿ ಮಹಾರಾಜರು ತಿಳಿಸಿದರು.
ಅವರು ಪಟ್ಟಣದ ಶ್ರೀ ಮಡಿವಾಳೇಶ್ವರ ಮಠದಲ್ಲಿ ನೂತನ ಶಿಲಾ ಮಠವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಮಡಿವಾಳೇಶ್ವರ ಶ್ರೀಗಳು ಮಡಿವಾಳೇಶ್ವರರ ಗುರುಪರಂಪರೆಯಂತೆ ಶ್ರೀಮಠದ ಸದ್ಭಕ್ತರನ್ನು ಧಾರ್ಮಿಕ ಮಾರ್ಗದಲ್ಲಿ ನಡೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಗಲಿರುಳು ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರ ಕಾರ್ಯಕ್ಕೆ ಶಿಲಾಮಠವೇ ಸಾಕ್ಷಿಯಾಗಿದೆ.ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಪವಾಡ ತೋರಿ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ ಎಂದರು.
ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಭಕ್ತರು ಮಡಿವಾಳೇಶ್ವರರ ಕೃಪೆಗೆ ಪಾತ್ರರಾಗಲು ಸೇವಾನಿರತರಾಗಬೇಕು ಎಂದರು.
ಗದಗ-ಡಂಬಳ ತೊಂಟದಾರ್ಯ ಮಠದ ತೊಂಟದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ಮಾತನಾಡಿ, ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ತಂಗೆಮ್ಮ ತಾಯಿಯವರ ಕಾರ್ಯ ಅವಿಸ್ಮರಣೀಯ.
ಅವರ ಹಾದಿಯಲ್ಲಿಯೇ ಧಾರ್ಮಿಕ ಸೇವೆಯನ್ನು ಮುಂದುವರೆಸಿ ಭಕ್ತರ ಉದ್ಧಾರಕ್ಕೆಂದು ನೂತನ ಶಿಲಾಮಠವನ್ನು ನಿರ್ಮಿಸಿರುವ ಶ್ರೀಮಠದ ಪೀಠಾಧಿಪತಿ ಮಡಿವಾಳೇಶ್ವರರ ಧಾರ್ಮಿಕ ಕಾರ್ಯ ಮುಂದುವರೆದು ನಾಡಿನಲ್ಲಿ ಶಾಂತಿ, ನೆಮ್ಮದಿ ಸದಾ ಮೂಡಲಿ ಎಲ್ಲರಿಗೂ ಧಾರ್ಮಿಕತೆ ಸಂಸ್ಕಾರ ದೊರಕಲಿ ಎಂದರು.
ಮಡಿವಾಳೇಶ್ವರ ಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಶಿವಶರಣೆ ತಂಗೆಮ್ಮಾತಾಯಿ ಅವರ ಮಾರ್ಗದರ್ಶನದಲ್ಲಿ ಜಯೇಂದ್ರಪುರಿ ಶ್ರೀಗಳ ಅನುಗ್ರಹದಲ್ಲಿ ಭಕ್ತರ ಕಷ್ಠಕ್ಕೆ ಸ್ಪಂದಿಸುತ್ತಾ ನಾಡನ್ನು ಉದ್ದರಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಎಲ್ಲರ ಸಹಕಾರ ಇರಲಿ ಎಂದರು.
ಹೊಸೂರ ಶ್ರೀ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬಳುಟಗಿ ಶಿವಕುಮಾರ ಸ್ವಾಮೀಜಿ, ಬಳ್ಳಾರಿಯ ಗೋವರ್ಧನಾನಂದ ಪುರಿ ಸ್ವಾಮೀಜಿ, ಶಿವನಾಪೂರದ ಪ್ರಣವಾನಂದ ಪುರಿ ಸ್ವಾಮೀಜಿ ಹಾಗೂ ಭಕ್ತರು ಇದ್ದರು.
Kshetra Samachara
07/01/2025 09:58 am