ಹೊಸದುರ್ಗ: ಗೂಳಿಹಟ್ಟಿ ಗ್ರಾಮವು ಭಾನುವಾರ ಸಂಪೂರ್ಣವಾಗಿ ಮೌನ ವಹಿಸಿತ್ತು. ಬಿಕೋ ಎನ್ನುತ್ತಿರುವ ಕೇರಿಗಳು, ಎಷ್ಟೇ ದೂರ ಕಣ್ಣಾಯಿಸಿದರೂ ಜನ-ಜಾನುವಾರುಗಳಿಲ್ಲ. ಹೌದು! ಇಡೀ ಊರಿಗೆ ಊರೇ ಹೊರಬೀಡು ಬಿಡುವ ಮೂಲಕ ಗ್ರಾಮಕ್ಕೆ ಬೀಗ ಬಿದ್ದು ಊರಿಂದ ಆಚೆಗೇ ಜನ ಇರುವಂತೆ ಆಗಿತ್ತು.
ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ಹೊರಬೀಡು ಎನ್ನುವ ಪದ್ಧತಿಯನ್ನು ಇಂದಿಗೂ ಕೂಡ ನಡೆಸಿಕೊಳ್ಳುತ್ತಾ ಬರುತ್ತಿದ್ದು, ಅದರಂತೆ ಗ್ರಾಮದ ಜನರೆಲ್ಲರೂ ಊರಿಂದ ಆಚೆ ತೋಟ, ಗುಡ್ಡಗಳಲ್ಲಿ ಒಂದು ದಿನದ ಮಟ್ಟಿಗೆ ಹೊರಬೀಡು ಎನ್ನುವ ಪದ್ಧತಿಯನ್ನು ಆಚರಣೆ ಮಾಡಿದ್ದಾರೆ.
ತಮ್ಮ ಪೂರ್ವಜರ ಕಾಲದಿಂದಲೂ ಈ ಒಂದು ಧಾರ್ಮಿಕ ಸಂಪ್ರದಾಯವನ್ನು ಮೂರು ವರ್ಷಕ್ಕೆ ಒಂದು ಬಾರಿ ಆಚರಣೆ ಮಾಡ್ತಾ ಬಂದಿದ್ದಾರೆ. ಸೂರ್ಯ ಉದಯಿಸುವ ಮೊದಲೇ ಗ್ರಾಮದ ಶ್ರೀ ಕರಿಯಮ್ಮ ದೇವಿ, ಶ್ರೀ ದೊಡ್ಡಮ್ಮ, ಹುತ್ತದ ಕೆಂಚಮ್ಮ ದೇವರುಗಳ ಜೊತೆಗೆ ಇಡೀ ಊರಿಗೆ ಊರೇ, ಮನೆಯ ಸಾಕು ಪ್ರಾಣಿಗಳನ್ನು ಹೊಡೆದುಕೊಂಡು ಊರಿನಿಂದ ಹೊರಗೆ ಬಂದು ಅಡಿಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ನೆರವೇರಿಸಿ ಊಟವನ್ನು ಮುಗಿಸಿ ನಂತರ ಸಂಜೆಯ ವೇಳೆ ದೇವರ ಮೆರವಣಿಗೆಯೊಂದಿಗೆ ಊರೊಳಗೆ ಹೊಕ್ಕು ಹಬ್ಬವನ್ನು ಸಂಭ್ರಮಿಸಿದ್ದಾರೆ.
ಬಳಿಕ ಗ್ರಾಮದ ಮುಖ್ಯ ದ್ವಾರಗಳಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮದ ಒಳಗೆ ಯಾರೂ ಪ್ರವೇಶವಾಗದಂತೆ ನಿರ್ಬಂಧ ಹೇರಲಾಗುತ್ತದೆ. ಒಟ್ಟಾರೆ ಗ್ರಾಮ ದೇವತೆಗಳನ್ನು ಅಲಂಕರಿಸಿಕೊಂಡು ವಿವಿಧ ವಾದ್ಯಗಳ ಮೂಲಕ ಗ್ರಾಮಕ್ಕೆ ಆಗಮಿಸುತ್ತಾರೆ. ಗ್ರಾಮದ ದ್ವಾರ ಬಾಗಿಲ ಮುಳ್ಳಿನ ಬೇಲಿ ತೆಗೆದು ಗ್ರಾಮಕ್ಕೆ ಪ್ರವೇಶಿಸಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ದೇವರೇ ಭೇಟಿ ಕೊಟ್ಟು ಮೊದಲ ಪೂಜೆ ನೆರವೇರಿಸಿ ಮನೆದೇವರಿಗೆ ದೀಪ ಹಚ್ಚಿ ದೇವಸ್ಥಾನಕ್ಕೆ ಹೋಗಿ ಬರುವಂತೆ ಸೂಚಿಸುತ್ತದೆ.
ಹೊರಬೀಡಿನ ವಿಶೇಷತೆ: ಗ್ರಾಮಕ್ಕೆ ಮಳೆ ಬೆಳೆ ಚೆನ್ನಾಗಿ ಆಗಿ ಗ್ರಾಮ ಸಮೃದ್ಧಿಯಾಗಲಿ, ರೋಗ-ರುಜಿನಗಳು ಗ್ರಾಮಕ್ಕೆ ಬಾರದಿರಲಿ, ಹಳ್ಳಿಗಳಲ್ಲಿ ವಿವಿಧ ಕಾರಣಕ್ಕೆ ಮಾತು ಬಿಟ್ಟವರು, ಮುನಿಸಿಕೊಂಡವರು, ಸಂಬಂಧಿಕರ ಬೆಸುಗೆ ಬೆರೆಯುವಂತದ್ದು, ದ್ವೇಷದ ನಡೆ ಅಲ್ಲಿಗೇ ಕೈ ಬಿಡುವಂತೆ ಆಗುತ್ತದೆ ಎಂಬುವುದು ಗ್ರಾಮಸ್ಥರ ನಂಬಿಕೆಯಾಗಿದೆ.
-ಜಿ.ಆರ್. ಠಾಕರಾಜ್, ಗೂಳಿಹಟ್ಟಿ ಗುಡಿಗೌಡರು
PublicNext
05/01/2025 09:05 pm