ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಪೂಜಾರಿಕೆ ಪಟ್ಟಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ!- ಹಲವರಿಗೆ ಗಾಯ

ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅಜಯ್ಯನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪೂಜಾರಿಕೆ ಪಟ್ಟಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹೌದು! ಇದಕ್ಕೆಲ್ಲ ಕಾರಣ ವೀರಮಾರಣ್ಣ ದೇವರ ಪೂಜಾರಿಕೆ ಪಟ್ಟ.

ಇದೇ ಗ್ರಾಮದಲ್ಲಿ ನೆಲೆಸಿರುವ ವೀರ ಮಾರಣ್ಣ ದೇವರು ಯಾದವ ಸಮುದಾಯದ ಆರಾಧ್ಯ ದೈವ. ಕಳೆದ ಹಲವು ದಶಕಗಳಿಂದ ಪೂಜಾರಿಕೆ ವಿಷಯಕ್ಕೆ ಇದೇ ಗ್ರಾಮದ ಎರಡು ಕುಟುಂಬಗಳ ನಡುವೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಆದರೆ, ಐದು ವರ್ಷಗಳ ಹಿಂದೆ ಲೋಕನಾಥಪ್ಪ ಎಂಬುವವರು ಕಳ್ಳತನ ಮಾಡಿದ್ದರು ಎಂಬ ಆರೋಪಕ್ಕೆ ಗುಡಿಕಟ್ಟಿನ ಯಜಮಾನರು ಲೋಕನಾಥಪ್ಪನನ್ನು ಪೂಜಾರಿಕೆ ಪಟ್ಟದಿಂದ ಕೆಳಗಿಳಿಸಿದ್ದರು. ಇದಕ್ಕೆ ಬದಲಾಗಿ ರಾಮಚಂದ್ರಪ್ಪ ಕುಟುಂಬಕ್ಕೆ ಪೂಜಾರಿಕೆ ಮಾಡುವಂತೆ ನೇಮಕ ಮಾಡಿದ್ರು.

ಇದೇ ದ್ವೇಷ ಕಳೆದ ಐದಾರು ವರ್ಷಗಳಿಂದ ಈ ಎರಡು ಕುಟುಂಬಗಳ ನಡುವೆ ಬೂದಿಮುಚ್ಚಿದ ಕೆಂಡದಂತಿತ್ತು. ಆದರೆ, ನಿನ್ನೆ ಸಂಜೆ ದೇವಸ್ಥಾನಕ್ಕೆ ಪೂಜೆ ಮಾಡಲು ಆಗಮಿಸಿದ್ದ ಪೂಜಾರಿ ಶಿವಕುಮಾರ್ ಮೇಲೆ ಏಕಾಏಕಿ ಲೋಕನಾಥಪ್ಪ ಆಂಡ್ ಗ್ಯಾಂಗ್ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿತ್ತು. ಘಟನೆಯಲ್ಲಿ ರಾಮಚಂದ್ರಪ್ಪ, ಭದ್ರಪ್ಪ, ಬಿಲ್ಲಪ್ಪ, ಪಾರ್ವತಮ್ಮ ಸೇರಿ ಹಲವರ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿನಿಮೀಯ ರೀತಿಯಲ್ಲಿ ಲೋಕನಾಥಪ್ಪ ಕುಟುಂಬ ಅಟ್ಯಾಕ್ ಮಾಡುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಶ್ರೀರಾಂಪುರ ಠಾಣೆಯ ಸಿಪಿಐ ಮಧು ಆಂಡ್ ಟೀಂ ಆಗಮಿಸಿದ್ದರು. ಕೂಡಲೇ ಕಲ್ಲು, ದೊಣ್ಣೆಗಳಿಂದ ದಾಳಿ ಮಾಡಿದ್ದ ಆರೋಪಿಗಳಾದ ಲೋಕನಾಥಪ್ಪ, ಮಹದೇವಪ್ಪ ಸೇರಿ ಹಲವರನ್ನು ಬಂಧಿಸಿದ್ದು, ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಒಟ್ಟಾರೆ ವೀರ ಮಾರಣ್ಣ ಸ್ವಾಮಿಯ ಪೂಜಾರಿಕೆ ಪಟ್ಟಕ್ಕೆ ಎರಡು ಗುಂಪುಗಳು ಕಾದಾಡಿದ್ದು, ಇಡೀ ಊರಿಗೆ ಊರೇ ಬೂದಿ ಮುಚ್ಚಿದ ಕೆಂಡದಂತಿದೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Edited By : Manjunath H D
PublicNext

PublicNext

04/01/2025 10:53 pm

Cinque Terre

47.68 K

Cinque Terre

0

ಸಂಬಂಧಿತ ಸುದ್ದಿ