ಅಥಣಿ: ಅದೊಂದು ಸುಂದರ ಕುಟುಂಬ. ಇಡೀ ಊರಿಗೆ ಊರೇ ಇವರನ್ನು ಕಂಡ್ರೆ ಕೈ ಮುಗಿತ್ತಿತ್ತು. ನಾಲ್ವರು ಮುದ್ದಾದ ಹೆಣ್ಣು ಮಕ್ಕಳು. ಗಂಡು ಮಗನ ನಿರೀಕ್ಷೆಯಲ್ಲಿದ್ದ ದಂಪತಿಗೆ ದೇವರು ವರ ಕರುಣಿಸಿದ್ದ. ಇನ್ನೇನು ಕೆಲವೇ ದಿನಗಳಲ್ಲಿ ಬಾಣಂತಿಯಾಗಬೇಕಿದ್ದ ಗರ್ಭಿಣಿ ದುರಂತ ಸಾವು ಕಂಡಿದ್ದು ಯಾಕೆ ? ಮಹಿಳೆ ಸಾವಿನ ಹಿಂದಿದೆ ಭಯಾನಕ ಸತ್ಯ! ಇದು ಕೀಚಕ ಭಾವನ ನೀಚ ಕೃತ್ಯ.
ಹೌದು... ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಡಿ.20ರಂದು ನಡೆದ ತುಂಬು ಗರ್ಭಿಣಿ ಸುವರ್ಣ ಮಠಪತಿ ಅವರ ಭೀಕರ ಕೊಲೆಗೆ ಇಡೀ ಗ್ರಾಮ ಬೆಚ್ಚಿ ಬಿದ್ದಿತ್ತು. ಮಟ ಮಟ ಮಧ್ಯಾಹ್ನ ಗರ್ಭಿಣಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದ. ಮನೆಗೆ ಬಂದ ಪತಿ ಸ್ಥಳೀಯರ ಸಹಾಯದಿಂದ ಹಾರೋಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತುಂಬು ಗರ್ಭಿಣಿ ಉಸಿರು ಚೆಲ್ಲುತ್ತಾಳೆ. ಈ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್,ರು ಆರೋಪಿಯ ಜಾಡು ಹಿಡಿದು ಪತ್ತೆ ಹಚ್ಚಲಾಗಿ, ಕೊಲೆಗಡುಕ ಮೃತ ಸುವರ್ಣಳ ಸ್ವಂತ ಅಕ್ಕನ ಗಂಡ ಅಂದ್ರೆ ಭಾವನೇ ಇಂತಹ ಪೈಶಾಚಿಕ ಕೃತ್ಯವೆಸಗಿರೋದು ಬಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಅಪ್ಪಯ್ಯ ರಾಚಯ ಮಠಪತಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೆಲಸವಿಲ್ಲದೆ, ಕುಡಿತದ ದಾಸನಾದ ಕೊಲೆ ಆರೋಪಿ ಅಪ್ಪಯ್ಯ 7.5 ಲಕ್ಷ ಸಾಲ ಮಾಡಿದ್ದ. ಆಗಾಗ ಮೃತ ಸುವರ್ಣ ಬಳಿಯೂ ಸ್ವಲ್ಪ ಸ್ಪಲ್ಪವಾಗಿ ಸುಮಾರು 50,000 ಹಣ ಪಡೆದಿದ್ದ. ಹಣ ನೀಡುವಂತೆ ಕೇಳುತ್ತಿದ್ದ ಸುವರ್ಣಗೆ, ನನಗೆ ಸಾಲ ತುಂಬಾ ಆಗಿದೆ. ಈಗ ಸದ್ಯಕ್ಕೆ ಕೊಡಲು ಆಗಲ್ಲ ಎಂದು ಸತಾಯಿಸುತ್ತಿದ್ದಾನಂತೆ.
ಕೊಲೆ ನಡಿಯೋ ಎರಡು ದಿನಗಳ ಹಿಂದೆ ಕೊಲೆ ಆರೋಪಿ ಅಪ್ಪಯ್ಯ ಜೊತೆ ಸುವರ್ಣ, ನನ್ನ ಡೆಲಿವರಿ ಸಮಯ ಹತ್ರ ಬಂದಿದೆ. ನನಗೆ ನನ್ನ ಹಣ ನೀಡು ಎಂದು ಫೋನ್ ನಲ್ಲಿ ಗದರಿದ್ದಾಳೆ. ಸಿಟ್ಟಿಗೆದ್ದ ಅಪ್ಪಯ್ಯ ಆಕೆಯನ್ನೇ ಮುಗಿಸಿ ಬಿಡುವ ಸಂಚು ಹಾಕಿ ಡಿ.20ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರ ತೋಟದ ಮನೆಗೆ ಬಂದು ಗರ್ಭಿಣಿ ಸುವರ್ಣ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೈಮೇಲಿದ್ದ ಓಲೆ ಹಾಗೂ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ಕೇವಲ ಹಣಕ್ಕಾಗಿ ತುಂಬು ಗರ್ಭಿಣಿ ಅಂತಾನೂ ಲೆಕ್ಕಿಸದೆ ನೀಚ ಕೃತ್ಯವೆಸಗಿದ ಪಾಪಿಯನ್ನು ಪೊಲೀಸ್ರು ಜೈಲಿಗಟ್ಟಿದ್ದಾರೆ. ಇತ್ತ ತಾಯಿ ಹಾಗೂ ಮಗುವನ್ನು ಕಳೆದುಕೊಂಡ ಕುಟುಂಬದ ರೋದನ ಹೇಳತೀರದಾಗಿದೆ.
-ಲಕ್ಷ್ಮಣ ಕೋಳಿ, ಕ್ರೈಮ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಅಥಣಿ
PublicNext
04/01/2025 09:19 am