ಬೆಳಗಾವಿ: ಐತಿಹಾಸಿಕ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದಕ್ಕೆ ಸ್ಥಳೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಗಂಭೀರ ಆರೋಪ ಕೇಳಿಬಂದಿದ್ದು ನೊಂದ ಕುಟುಂಬವೊಂದು ಪುಟ್ಟ ಪುಟ್ಟ ಮಕ್ಕಳ ಸಮೇತ ನ್ಯಾಯ ಕೊಡಿಸುವಂತೆ ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಕೊನೆಗೆ ಬೆಳಗಾವಿ ಡಿಸಿ ಕಚೇರಿಗೆ ಬಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಗ್ಯಾರೇಜ್ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಬಡ ಮುಸ್ಲಿಂ ಕುಟುಂಬದ ಮೇಲೆ ದೌರ್ಜನ್ಯ ನಡೆಸಿರುವ ಆರೋಪವೂ ಕೇಳಿಬಂದಿದ್ದು ಒಂದು ಗುಂಟೆ ಜಾಗದ ವಿವಾದ ಮುಂದಿಟ್ಟುಕೊಂಡು ಗ್ರಾಮದ ಕೆಲವರು ಬಹಿಷ್ಕಾರ ಹಾಕಿದ್ದಾರೆ ಎಂದು ಮಕ್ತುಮಸಾಬ್ ಹುಜರತಿ ಆರೋಪಿಸಿದ್ದಾರೆ. ಗ್ರಾಮದಲ್ಲಿ ದಿನಸಿ ವಸ್ತು ಖರೀದಿ, ಕುಡಿಯುವ ನೀರಿಗಾಗಿಯೂ ಪರದಾಡುತ್ತಿದ್ದೇವೆ. ದಿನಬಳಕೆ ವಸ್ತುಗಳನ್ನು ತೆಗೆದುಕೊಳ್ಳಲು ಬೈಲಹೊಂಗಲಕ್ಕೆ ಹೋಗುತ್ತಿದ್ದೇವೆ. ಮತ್ತೊಂದೆಡೆ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರೋ ಆಟೋ ಎಲೆಕ್ಟ್ರಿಕ್ ಗ್ಯಾರೇಜ್ ಬಂದ್ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದು ಬಹಿಷ್ಕಾರ ಹಾಕಿದ ವಿಚಾರಕ್ಕೆ ಸ್ಥಳೀಯ ದೊಡವಾಡ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಕ್ತುಮ್ ಸಾಬ್ ಹುಜರತಿ ಪತ್ನಿ ಕೌಸರ್‌ಬಾನು ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಮುಕ್ತುಸಾಬ ಹುಜರತಿ ತಮ್ಮ ಮನೆಯ ಪಕ್ಕದಲ್ಲಿ 301/2 ಸರ್ವೇ ನಂಬರ್ ಪೈಕಿ 07ನೇ ಪ್ಲಾಟ್ ಖರೀದಿ ಮಾಡಿದ್ದಾರೆ. ಅಡಿವೆಪ್ಪ ಈರಪ್ಪ ಮುನವಳ್ಳಿ ಎಂಬ ಮೂಲ ಮಾಲೀಕರಿಂದ 2016ರಲ್ಲಿ ಪ್ಲಾಟ್ ಖರೀದಿಸಿದ ಬಾಂಡ್ ಪೇಪರ್ ಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಇದು ಗ್ರಾಮ ಪಂಚಾಯತ್ ಆಸ್ತಿ ಎಂದು ಗ್ರಾಮದ ಕೆಲವರು ತಗಾದೆ ತೆಗೆದಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರ ಬೆಂಬಲಿಗರು, ಸದಸ್ಯ ಬಸವರಾಜ ನರೇಗಲ್ ಸೇರಿದಂತೆ ಹಲವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಪಂಚಾಯತ್ ಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಇಲ್ಲ. ಕೋರ್ಟ್ ಆದೇಶದ ಪ್ರತಿಯೂ ಇಲ್ಲದೇ ಏಕಾಏಕಿ ತಗಡಿನ ಶೆಡ್ ತೆರವು ಮಾಡಿದ್ದಾರೆ.2 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ತಗಡಿನ ಶೆಡ್ ತೆರವು ಮಾಡಿದ್ದು ಅವುಗಳನ್ನ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿದ್ದಾರಂತೆ. ನಾವು ಒಂದು ಗುಂಟೆ ಜಾಗ ಪಂಚಾಯತ್ ಕೊಟ್ಟರಷ್ಟೇ ಬಹಿಷ್ಕಾರ ವಾಪಸ್ ಪಡೆಯುತ್ತೇವೆ ಎಂದು ಗ್ರಾಮದ ಜನರು ಹೇಳುತ್ತಿದ್ದಾರಂತೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಘಟನೆ ನಡೆದು ಒಂದು ತಿಂಗಳಾದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬೆಳಗಾವಿ ಡಿಸಿ ಮಹಮ್ಮದ್ ರೋಷನ್, ಎಸ್ಪಿ ಕಚೇರಿಗೆ ಆಗಮಿಸಿದ ನೊಂದ ಕುಟುಂಬ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ನಮಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ ಮುಸ್ಲಿಂ ಕುಟುಂಬಕ್ಕೆ ಇನ್ನಾದರೂ ಜಿಲ್ಲಾಡಳಿತ, ಪೊಲೀಸ್ ನೊಂದ ಕುಟುಂಬಕ್ಕೆ ನ್ಯಾಯಕೊಡಿಸಬೇಕು ಎಂದು ಒತ್ತಾಯ ಮಾಡಿದೆ.
Kshetra Samachara
06/01/2025 06:04 pm